ಬೆಂಗಳೂರು /ರಾಮನಗರ: ಮಹಾನಗರದ ಕೋವಿಡ್ ಸ್ಥಿತಿಗತಿಯ ಕುರಿತು ಮಾಹಿತಿ ಪಡೆಯಲು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಇಂದೂ ಕೂಡ ಆನ್‌ಲೈನ್ ಸಭೆ ನಡೆಸಿದರು.
ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜೆಡಿಎಸ್ನ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ರೂತ್ ಮನೋರಮಾ, ಜೆಡಿಎಸ್ ಮುಖಂಡರಾದ ನಾರಾಯಣಸ್ವಾಮಿ ಮತ್ತಿತರು ಭಾಗಿಯಾಗಿದ್ದರು.
ಕೊರೊನಾ ಚಿಕಿತ್ಸೆ, ಔಷಧ, ಲಸಿಕೆ ಅಭಿಯಾನ, ಆಹಾರ ಪೂರೈಕೆ ಕುರಿತು ಮುಖಂಡರಿಂದ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡು ಕೆಲವು ಸಲಹೆಗಳನ್ನು ನೀಡಿದರು.
ರಾಮನಗರಕ್ಕೆ ಎರಡು ಆ್ಯಂಬುಲೆನ್ಸ್
ರಾಮನಗರದಲ್ಲಿ ಆ್ಯಂಬುಲೆನ್ಸ್ ಕೊರತೆ ಇರುವುದಾಗಿ ತಹಶೀಲ್ದಾರರು ಗಮನಕ್ಕೆ ತಂದಿದ್ದಾರೆ. ಸೋಮವಾರದ ಒಳಗೆ ಆ್ಯಂಬುಲೆನ್ಸ್ ಒದಗಿಸಲಾಗುವುದು. ತಕ್ಷಣಕ್ಕೆ ಒಂದು ಆ್ಯಂಬುಲೆನ್ಸ್ ಅಗತ್ಯವಿದ್ದು, ಕಾಲಮಿತಿಯೊಳಗೆ ಎರಡು ಆ್ಯಂಬುಲೆನ್ಸ್ ನೀಡುವುದಾಗಿ ಭರವಸೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಐವರು ಬ್ಲಾಕ್ ಫಂಗಸ್ ರೋಗಕ್ಕೆ ತುತ್ತಾಗಿದ್ದಾರೆ. ಈಗಾಗಲೇ ಅವರನ್ನು ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ತಹಶೀಲ್ದಾರ್ ಒಬ್ಬರು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದರು. ಪೊಲೀಸರ ನೆರವಿನೊಂದಿಗೆ ಜಿಲ್ಲೆಯಲ್ಲಿ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಲಹೆ ನೀಡಿದರು.