ರಾಮನಗರ: ಸಿದ್ದರಾಮಯ್ಯರಿಂದ ನಾನು ಮುಖ್ಯಮಂತ್ರಿ ಆಗಿಲ್ಲ. ನಾನು ಸಿಎಂ ಅಗಿದ್ದನ್ನು ಎಷ್ಟರ ಮಟ್ಟಿಗೆ ಸಹಿಸಿಕೊಂಡಿದ್ದರು ಎಂಬುದು ಗೊತ್ತಿದೆ. ಅವರ ಪಕ್ಷದ ಶಾಸಕರ ಬಳಿಯೇ ಲೋಕಸಭಾ ಚುನಾವಣೆ ನಂತರ ಈ ಸರ್ಕಾರ ಇರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಸಿದ್ದು ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರಿಂದ ನಾನು ಮುಖ್ಯಮಂತ್ರಿ ಆಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದ್ದು, ಇದನ್ನು ಸಿದ್ದರಾಮಯ್ಯ ಸಹಿಸಿಕೊಳ್ಳಲಿಲ್ಲ. ಇಲ್ಲದಿದ್ದರೆ ಈ ಸರ್ಕಾರ 5 ವರ್ಷ ಪೂರೈಸುತ್ತಿತ್ತು ಎಂದರು.
ನಾನು ಸಿದ್ದರಾಮಯ್ಯ ಸಾಕಿದ ಗಿಣಿ ಅಲ್ಲ, ನನ್ನನ್ನ ಸಾಕಿರೋದು ರಾಮನಗರ ಜಿಲ್ಲೆಯ ಜನತೆ. ಅವರು ಕೊಟ್ಟ ಶಕ್ತಿ ಉಪಯೋಗಿಸಿಕೊಂಡು ರಾಜಕೀಯದಲ್ಲಿ ಬೆಳದಿರೋನು. ಸಿದ್ದರಾಮಯ್ಯ ನೆರಳಲ್ಲಿ ನಾನು ಬೆಳದವನಲ್ಲ. ನನ್ನ ಜೊತೆ ಸಿದ್ದರಾಮಯ್ಯನವರ ಒಡನಾಟವೂ ಇಲ್ಲ. ದೇವೆಗೌಡರು ಮತ್ತು ಅವರ ನಡುವೆ ಒಡನಾಟವಿತ್ತು. ಅವರನ್ನ ನಾಯಕರನ್ನಾಗಿ ಬೆಳೆಸುವಲ್ಲಿ ದೇವೇಗೌಡರ ಪಾತ್ರವೇನು ಎಂಬುದನ್ನ ಅವರೇ ಪ್ರಶ್ನೆ ಹಾಕಿಕೊಳ್ಳಲಿ ಎಂದರು.
ಯರೋ ಹಣ ಹಾಕುತ್ತಾರೆ, ಯಾರೋ ದುಡಿಮೆ ಮಾಡುತ್ತಾರೆ. ಅದರಲ್ಲಿ ನಾಯಕರಾಗಿ ಬೆಳೆದವರು ಸಿದ್ದರಾಮಯ್ಯ. ಕಾಂಗ್ರೆಸ್ ಪಕ್ಷ ಬಿಟ್ಟು ಹೊರಬಂದು ರಾಜ್ಯದಲ್ಲಿ ಪಕ್ಷ ಬೆಳೆಸಲಿ. ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಲು ಹೊರಟಿರೋರು ಸಿದ್ದರಾಮಯ್ಯ ಅವರಿಂದ ನಾನು ಕಲಿಯಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.