ರಾಮನಗರ: ಕನಕಪುರದ ಮರಳೆಗವಿ ಮಠದ ಪಕ್ಕದ ರಸ್ತೆಯಲ್ಲಿ ಕಾರಿನಲ್ಲಿ ಜಿಲೆಟಿನ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳೆಗವಿ ಮಠದ ಪಕ್ಕದಲ್ಲಿ ಕಾರು ಸ್ಫೋಟಗೊಂಡು ಚಾಲಕ ಮಹೇಶ್ನ ದೇಹ ಛಿದ್ರ ಛಿದ್ರವಾಗಿತ್ತು. ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕಾರು ಸ್ಫೋಟವಾಗಿರುವುದು ಜಿಲೆಟಿನ್ ಕಡ್ಡಿಗಳಿಂದಲೇ ಎಂದು ತನಿಖೆ ವೇಳೆ ಖಚಿತವಾಗಿದೆ.
ಪ್ರಕಾಶ್ ರಾವ್, ಸುನೀಲ್ ರಾವ್, ಹರೀಶ್ ಹಾಗೂ ರಾಮಣ್ಣ ಬಂಧಿತರು. ಮೃತ ಮಹೇಶ್ ಕನಕಪುರದಲ್ಲಿ ಲೈಸನ್ಸ್ ಹೊಂದಿದ್ದವರ ಬಳಿ ದುಪ್ಪಟ್ಟು ಹಣ ನೀಡಿ ಒಂದು ಪ್ಯಾಕ್ ಜಿಲೆಟಿನ್ ಕಡ್ಡಿಗಳ ಬಾಕ್ಸ್ ಖರೀದಿ ಮಾಡಿದ್ದ. ಈ ಜಿಲೆಟಿನ್ ಕಡ್ಡಿಗಳನ್ನು ಕಾರಿನಲ್ಲಿ ಇರಿಸಿಕೊಂಡಿದ್ದ ವೇಳೆ ಕಾರು ಸ್ಫೋಟಗೊಂಡಿತ್ತು. ಆದ್ರೆ ಈ ಜಿಲೆಟಿನ್ ಕಡ್ಡಿ ಹೇಗೆ ಸ್ಫೋಟಗೊಂಡಿತ್ತು ಎಂಬುದು ಎಫ್.ಎಸ್.ಎಲ್ ವರದಿಯಿಂದ ಗೊತ್ತಾಗಬೇಕಿದೆ. ಕನಕಪುರ ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಕಲ್ಲು ಗಣಿಗಳಿದ್ದು, ಅಕ್ರಮವಾಗಿ ಸ್ಪೋಟಕಗಳನ್ನ ಸಂಗ್ರಹಣೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಕಾರು ಸ್ಫೋಟದ ಕುರಿತು ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು, ಇದೀಗ ನಾಲ್ವರನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.