ರಾಮನಗರ: ಪಾದರಾಯನಪುರದ ಆರೋಪಿಗಳನ್ನು ರಾಮನಗರ ಜೈಲಿಗೆ ತಂದು, ಗ್ರೀನ್ ಜೋನ್‌ನಲ್ಲಿರುವ ರಾಮನಗರವನ್ನು ಕೊರೊನಾ ಹಾಟ್‌ಸ್ಪಾಟ್ ಮಾಡಲು ರಾಜ್ಯ ಸರ್ಕಾರ ಹೊರಟಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬಡವರಿಗೆ ವಿತರಣೆ ಮಾಡಲು ಸಿದ್ಧಗೊಳ್ಳುತ್ತಿರುವ ಆಹಾರ ಕಿಟ್‌ಗಳನ್ನ ವೀಕ್ಷಣೆ ಮಾಡಿ ಮಾತನಾಡಿದ ಅವರು, ಅಲ್ಲಿನ ಆರೋಪಿಗಳನ್ನು ಇಲ್ಲಿಗೆ ಕರೆತರಲು ಸರ್ಕಾರಕ್ಕೆ ಸಲಹೆ ಕೊಟ್ಟವರು ಯಾರು..? ಈ ಬಗ್ಗೆ ನಾನು ನಿನ್ನೆ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳ ಜೊತೆಗೆ ಮಾತನಾಡಿದ್ದೆ. ಈ ವೇಳೆ ಸಿಎಂ ಬಿಎಸ್ವೈ ಬೇರೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ರು. ಆದರೆ, ಇಂದು ಮತ್ತೆ 72 ಮಂದಿಯನ್ನು ರಾಮನಗರ ಕಾರಾಗೃಹಕ್ಕೆ ಕರೆ ತಂದಿದ್ದಾರೆ. ಸಿಎಂ ಹಾಗೂ ಗೃಹ ಮಂತ್ರಿಗಳು ನಾವು ಏನ್ ಬೇಕಾದ್ರು ಮಾಡಬಹುದು ಅಂತಾ ಉದ್ಧಟತನ ತೋರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಮಗನ ಮದುವೆ ಮಾಡಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ, ರಾಮನಗರವನ್ನು ರೆಡ್ ಜೋನ್ ಮಾಡಲು ಕುಮಾರಸ್ವಾಮಿ ಹೊರಟ್ಟಿದ್ದಾರೆ ಎಂದು ಟೀಕೆ ಮಾಡುತ್ತಿದ್ದರು. ಇವಾಗ ಯಾಕೆ ಸುಮ್ಮನಿದ್ದಾರೆ ಎಂದು ಕಿಡಿಕಾರಿದ್ರು.
ಇನ್ನು ರೈತರ ಬೆಳೆಗಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಕ್ಕೆ ಈ ಬಗ್ಗೆ ಹಲವು ಸಲಹೆಗಳನ್ನು ಕೊಟ್ಟಿದ್ದೇನೆ. ಆದರೆ, ಸರ್ಕಾರ ಪರಿಗಣಿಸುತ್ತಿಲ್ಲ. ನಾನೇನಾದರೂ ಸಿಎಂ ಆಗಿದ್ದಿದ್ದರೆ ರೈತರ ಎಲ್ಲ ಬೆಳೆಗಳ ಉಳಿವಿಗೆ ಅಂತಾನೆ 5 ಸಾವಿರ ಕೋಟಿ ಪ್ಯಾಕೇಜ್ ಕೊಡುತ್ತಿದ್ದೆ. ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ನಾನು ರೈತರ ವಿಷಯದಲ್ಲಿ ಪ್ರಾಮಾಣಿಕವಾಗಿ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ ಎಂದು ಹೇಳಿದರು.
ಮಣ್ಣಿನ ಮಕ್ಕಳು ಲಾಕ್‌ಡೌನ್ ಸಮಯದಲ್ಲಿ ಎಲ್ಲಿ ಹೋಗಿದ್ದಾರೆ ಎಂಬ ಕಾಂಗ್ರೆಸ್ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇಂಥವರಿಂದ ನಾವು ಹೇಳಿಸಿಕೊಳ್ಳುವ ಪ್ರಮೇಯ ಇಲ್ಲ. ಪಾಪ ಅವರಿಗೆ ಮಣ್ಣಿನ ಮಕ್ಕಳ ಕೊಡುಗೆ ಬಗ್ಗೆ ಗೊತ್ತಿಲ್ಲ ಅನ್ಸುತ್ತೆ. ರೈತರ ಜಮೀನಿಗೆ ತೆರಳಿ 10 ಟನ್ ಟೊಮೇಟೊಗೆ 20 ಸಾವಿರ ಕೊಟ್ಟು ಖರೀದಿ ಮಾಡಿ ಜನ್ರಿಗೆ ವಿತರಣೆ ಮಾಡುವುದು ಅಲ್ಲ. ನಾವು ಅಂತವರ ರೀತಿಯಲ್ಲಿ ಬಡವರಗೆ ವಿತರಣೆ ಮಾಡುತ್ತಿಲ್ಲ. ರಾಮನಗರ - ಚನ್ನಪಟ್ಟಣ ತಾಲೂಕುಗಳಲ್ಲಿ 60 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದೆ. ಸುಮಾರು 5 ಕೋಟಿ ವೆಚ್ಚದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ. ಮಣ್ಣಿನ ಮಗ ಅಂತಾ ನಾವು ಕರೆದುಕೊಂಡಿಲ್ಲ. ರಾಜ್ಯದ ಜನರು ಮಣ್ಣಿನ ಮಕ್ಕಳು ಅಂತಾ ಕರೆದಿರೋದು ಎಂದು ಬಾಲಕೃಷ್ಣಗೆ ಟಾಂಗ್ ನೀಡಿದ್ರು.