ರಾಮನಗರ: ಜಿಲ್ಲೆಯಲ್ಲಿ ಸಂಭವಿಸಿರುವ ಆನೆದಾಳಿ ಘಟನೆಗಳು, ಹಾನಿ, ನಿಯಂತ್ರಣ ಪರಿಹಾರದ ಕುರಿತು ಅಧಿಕಾರಿಗಳೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಹೆಚ್‌ಡಿಕೆ, ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಬೇಗನೆ ಸಚಿವ ಸಂಪುಟ ವಿಸ್ತರಣೆ ಮಾಡದೆ ಒಬ್ಬರೇ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿತ್ತು. ಅದೇ ರೀತಿ ಈಗಲೂ ಕೂಡ ಬೊಮ್ಮಾಯಿ ಒಬ್ಬರೇ ಇದ್ದಾರೆ. ಬಹುಬೇಗನೆ ಬಿಜೆಪಿ ಹೈಕಮಾಂಡ್ ಶಾಸಕರ ಮನವೊಲಿಸಿ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸಚಿವ ಸಂಪುಟ ಕಸರತ್ತು ಬಿರುಸಿನಿಂದ ನಡೆಯುತ್ತಿದೆ. ಸಚಿವ ಸ್ಥಾನಕ್ಕಾಗಿ ಕೆಲವರು ದೆಹಲಿಗೆ ಹೋಗಿದ್ದಾರೆ. ಈ ಹಿಂದೆ ಕೂಡ ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಇದೇ ಸಮಸ್ಯೆ ಇತ್ತು. ಈಗ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಆದಷ್ಟು ಬೇಗ ಕೇಂದ್ರದವರು ಕ್ಯಾಬಿನೆಟ್ ಬಗ್ಗೆ ನಿರ್ಧಾರ ಮಾಡಲಿ. ಶಾಸಕರ ಮನವೊಲಿಸಿ ಬೇಗ ಸಂಪುಟ ರಚನೆ ಮಾಡಬೇಕಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ ಕೊರೊನಾ, ಪ್ರವಾಹ ಪರಿಸ್ಥಿತಿ ಇದೆ. ಹಾಗಾಗಿ ಆದಷ್ಟು ಬೇಗ ಸರ್ಕಾರ ಫೀಲ್ಡ್‌ನಲ್ಲಿ ಕೆಲಸ ಮಾಡಬೇಕಿದೆ. ಬೊಮ್ಮಾಯಿ ರಬ್ಬರ್ ಅಥವಾ ಐರನ್ ಸ್ಟಾಂಪ್ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಅವರಿಗೆ ನಾವು ಕೆಲಸ ಮಾಡಲು ಸಮಯ ಕೊಡಬೇಕಿದೆ. ಕೆಲವರು ಆತುರದಿಂದ ಹೇಳಿಕೆ ಕೊಡುತ್ತಿದ್ದಾರೆ. ನಾನು ಯಡಿಯೂರಪ್ಪ ಬಗ್ಗೆ ಸಾಫ್ಟ್ ಇದ್ದೆ. ಈಗಲೂ ಸಾಫ್ಟ್ ಇದ್ದೇನೆ, ದ್ವೇಷ ಸಾಧಿಸಿ ಪ್ರಯೋಜನ ಇಲ್ಲ.
ಇದಲ್ಲದೆ ರಾಜ್ಯದ ಜನರು ಅವಕಾಶ ಕೊಟ್ಟಿದ್ದಾರೆ. ಆ ಅವಕಾಶವನ್ನು ಒಳ್ಳೆಯ ರೀತಿ ಬಳಕೆ ಮಾಡಿಕೊಳ್ಳಲಿ. ರಾಜ್ಯದ ಅಭಿವೃದ್ಧಿ ಪರವಾಗಿ ಕೆಲಸ ಮಾಡಲಿ. ಹಾಗೆಯೇ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಅವರ ಭವಿಷ್ಯ ಒಳ್ಳೆಯದಾಗಲಿ ಎಂದರು.