ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯ ರಾಮಮ್ಮನ ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ. ಪ್ರತಿದಿನ ಮೀನುಗಳು ಸಾವನ್ನಪ್ಪಿ ದಡ ಸೇರುತ್ತಿವೆ. ತಿಟ್ಟಮಾರನಹಳ್ಳಿ ಗ್ರಾಮದ ಸಂಪತ್ ಕುಮಾರ್ ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ಸಾಕಣೆಗಾಗಿ ಕೆರೆಯನ್ನು 26,30,000 ಲಕ್ಷ ರೂಪಾಯಿಗೆ ಟೆಂಡರ್ ಪಡೆದಿದ್ದರು. ಆದರೀಗ ಮೀನುಗಳು ಅನುಮಾನಾಸ್ಪದವಾಗಿ ಸಾಯುತ್ತಿದ್ದು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
1ಲಕ್ಷ ಮೀನಿನ ಮರಿಗಳನ್ನು ಕೆರೆಗೆ ಬಿಡಲಾಗಿತ್ತು. ಮೀನುಗಳು ಬೆಳವಣಿಗೆ ಆಗಿದ್ದವು. ಇನ್ನೇನು ಕೆರೆಗೆ ಬಲೆ ಹಾಕಿ ಮೀನುಗಳನ್ನು ಹಿಡಿದು ಮಾರಾಟ ಮಾಡುವಂತಹ ಸಮಯದಲ್ಲಿ ಸಾವನ್ನಪ್ಪುತ್ತಿವೆ. ಈ ಬಗ್ಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ರೆ ನಿರ್ಲಕ್ಷ್ಯ ತೋರುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ರಾಮಮ್ಮನ ಕೆರೆಗೆ ಚನ್ನಪಟ್ಟಣದ ಶೇ.40ರಷ್ಟು ತ್ಯಾಜ್ಯ ನೀರು ಸೇರುತ್ತಿದೆ. ಪ್ರಮುಖವಾಗಿ ಚನ್ನಪಟ್ಟಣ ನಗರದ ಬಡಾಮಕಾನ್, ಎಲೇಕೇರಿ, ಕೋಟೆ ಸೇರಿ ಹಲವು ಬಡಾವಣೆಯ ಕೊಳಚೆ ನೀರು ಜೊತೆಗೆ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತ್ಯಾಜ್ಯವೂ ಸೇರುತ್ತಿದೆ. ಇದರಿಂದ ವಿಷಪೂರಿತ ವಸ್ತುಗಳು ಕೆರೆನೀರು ಸೇರಿ ಮೀನುಗಳು ಸಾಯುತ್ತಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಇತ್ತೀಚೆಗೆ ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದ್ರಲ್ಲಿ ನಿಷೇಧಿತ ಕ್ಯಾಟ್ ಫಿಶ್ ಕೆರೆಗಳನ್ನು ಸೇರುತ್ತಿವೆ. ಇವುಗಳು ಸಹ ಉಳಿದ ಮೀನುಗಳನ್ನು ಸಾಯಿಸುತ್ತಿವೆ ಎನ್ನುವ ಮಾತುಗಳಿವೆ.
ಇದನ್ನೂ ಓದಿ: ಹಾಸನ: ಗೋದಾಮಿನ ಮೇಲೆ ಆನೆ ದಾಳಿ, ಅಪಾರ ಪ್ರಮಾಣದ ಅಕ್ಕಿ ಹಾನಿ