ರಾಮನಗರ : ನಮ್ಮ ಕುಟುಂಬದ 50 ವರ್ಷದ ರಾಜಕಾರಣದಲ್ಲಿ ತುಂಬಾ ಜನರನ್ನು ನೋಡಿದ್ದೇನೆ. ನಾನು ರಾಜಕಾರಣದಲ್ಲಿ ಎಂದು ಸಹ ಸಿದ್ದರಾಮಯ್ಯ ಅವರ ಹಂಗಿನಲ್ಲಿ ಬಂದಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಸೋತಾಗ ಸಿದ್ದರಾಮಯ್ಯ ಕಣ್ಣೀರಿಟ್ಟಿದ್ದರು : ರಾಮನಗರ ಜಿಲ್ಲೆ ಬಿಡದಿ ತೋಟದ ಮನೆಯಲ್ಲಿ ಮಾತನಾಡಿದ ಅವರು, ದೇವೇಗೌಡರು ಸಾತನೂರಿನಲ್ಲಿ ಚುನಾವಣೆಗೆ ನಿಂತಾಗ ನಾನೇ ನೇತೃತ್ವವಹಿಸಿಕೊಂಡಿದ್ದೆ. ಜನತಾ ಪಕ್ಷದಲ್ಲಿ ಇದ್ದಾಗ ನಾನು ಅನೇಕರಿಗೆ ಚುನಾವಣೆಯಲ್ಲಿ ಸಹಾಯ ಮಾಡಿದ್ದೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ.
ಸಿದ್ದರಾಮಯ್ಯ ಅವರು ಜಾತ್ಯಾತೀತ ಜನತಾದಳದ ಅಧ್ಯಕ್ಷರಾಗಿದ್ದರು. 1999ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಾಗ, ನಮ್ಮ ಅನುಗ್ರಹ ಮನೆಗೆ ಬಂದು ಕಣ್ಣೀರಿಟ್ಟಿದ್ದರು. ರಾಜಕಾರಣ ಬಿಟ್ಟು ಕರಿ ಕೋಟ್ ಹಾಕಿಕೊಳ್ತೇನೆ ಅಂದಿದ್ರು. ಆಗ ದೇವೇಗೌಡರು ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬಿದರು.
ಜೆಡಿಎಸ್ ಮುಗಿಸಲು ಮುಂದಾಗಿದ್ರಿ : ಯಾರೋ ಕಾರ್ಯಕರ್ತರು ಜನ ಸೇರಿಸ್ತಾರೆ, ಇವರೂ ಹೋಗಿ ಭಾಷಣ ಮಾಡ್ತಾರೆ. ಯಾವ ಜೆಡಿಎಸ್ನ ಪಕ್ಷದಿಂದ ಉಪ ಮುಖ್ಯಮಂತ್ರಿ ಆಗಿದ್ರೋ, ಅವತ್ತೆ ನೀವು ಜೆಡಿಎಸ್ ಮುಗಿಸಲು ಮುಂದಾಗಿದ್ರಿ ಎಂದು ಸಿದ್ದರಾಮಯ್ಯ ವಿರುದ್ದ ಹೆಚ್‌ಡಿಕೆ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಮುಗಿಸಲು ಪ್ಲಾನ್ ಮಾಡಿದ ಸಂದರ್ಭದಲ್ಲಿ ನಿಮ್ಮನ್ನ ಪಕ್ಷದಿಂದ ಹೊರ ಹಾಕಿದ್ವಿ. ಅಂದು 58 ಜನ ಶಾಸಕರು ಆಯ್ಕೆ ಆಗಿದ್ದರು. ಕಾಂಗ್ರೆಸ್ ಹೆಸರಿನಲ್ಲಿ ಇವಾಗ ಅಹಿಂದ ಹೋರಾಟ ಮಾಡ್ತೀರಾ. ಜಾತಿಗಣತಿ ವಿಚಾರದಲ್ಲಿ ನನ್ನನ್ನು ಡಬಲ್ ಗೇಮ್ ಅಂತೀರಾ. ಕಾಂಗ್ರೆಸ್ ಅವರು ಲೆಕ್ಕಾಚಾರ ಮಾಡಿಲ್ಲ ಅಂದ್ರೆ ಕೊನೆಗೆ ಕಾಂಗ್ರೆಸ್ ಪಕ್ಷಕ್ಕೆ ಬೆಂಕಿ ಇಡೋದೇ ಇದೇ ಸಿದ್ದರಾಮಯ್ಯ ಎಂದರು.
ಮಾತಿನ ಮೇಲೆ ನಿಗಾ ಇರಬೇಕು : ಇನ್ನು ಮೈತ್ರಿ ಸರ್ಕಾರ ರಚನೆ ಆದ ನಂತರ. ನಾನು ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಅಧಿಕಾರ ನಡೆಸ್ತಿದ್ದೆ ಅಂದಿದ್ದೀರಾ. ನಾನು ಅಲ್ಲಿ ಕೂತ್ಕೊಂಡು ರೈತರ ಸಾಲ ಮನ್ನಾ ವಿಚಾರ ಚರ್ಚೆ ಮಾಡ್ತಿದ್ದೆ. ಮಾತಿನ ಮೇಲೆ ನಿಗಾ ಇರಬೇಕು ಎಂದು ವಾಗ್ಧಾಳಿ ನಡೆಸಿದರು.
ಎಂಟಿಬಿ ಯಾಕೆ ಪಕ್ಷ ಬಿಟ್ರು? : ನಿಮ್ಮ ಶಾಸಕರ ವಿಚಾರಲ್ಲಿ ನಾನು ಯಾವ ರೀತಿ ನೋಡ್ಕೊಂಡು ಇದ್ದೀನಿ ಅಂತಾ ನನಗೆ ಗೊತ್ತು. ಸರ್ಕಾರ ಪತನ ವೇಳೆ ನಾನು ಅಮೆರಿಕಾ ಪ್ರವಾಸದಲ್ಲಿದ್ದೆ. ಚುಂಚನಗಿರಿ ಶ್ರೀಗಳು ಅಮೆರಿಕಾದಲ್ಲಿ ದೇವಸ್ಥಾನ ನಿರ್ಮಾಣ ವಿಚಾರ ಚರ್ಚಿಸಲು ಹೋಗಿದ್ದೆ. ಮೈತ್ರಿ ಸರ್ಕಾರ ನಡೆಸಲು ನನಗೂ ಕೂಡ ಇಷ್ಟ ಇರಲಿಲ್ಲ.
ಧರ್ಮಸ್ಥಳದಲ್ಲಿ ಕೂತ್ಕೊಂಡು ಸರ್ಕಾರ ತೆಗೆಯೋಕೆ ಪ್ಲಾನ್ ಮಾಡಿದ್ದು ಯಾರು ಸ್ವಾಮಿ? ಇದೇ ಎಂಟಿಬಿ ನಾಗರಾಜು ಎದೆ ಬಗೆದ್ರೆ ಸಿದ್ದರಾಮಯ್ಯ ಕಾಣ್ತಾರೆ ಅಂದಿದ್ರು. ಮತ್ತೆ ಯಾಕೆ ಎಂಟಿಬಿ ಪಕ್ಷ ಬಿಟ್ಟು ಹೋದರು ಎಂದ್ರು.
ನಮ್ಮ ಪಕ್ಷದ ಶಾಸಕರು 3 ಜನ ಪಕ್ಷ ಬಿಟ್ಟು ಹೋದ್ರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ನೀವೆಲ್ಲಾ ಮಾಡಿದ ಹುನ್ನಾರಕ್ಕೆ ಸರ್ಕಾರ ಪತನವಾಯಿತು. ಬಡವರಿಗೆ ಸುಲುಭವಾಗಿ ನಾನು ಸಿಎಂ ಆಗಿ ಸಿಗ್ತಿದ್ದೆ. ನೀವು ಸಿಎಂ ಆಗಿದ್ದಾಗ ಸಂಜೆ 6 ಗಂಟೆ ಮೇಲೆ ಸಿಕ್ತಾ ಇರಲಿಲ್ಲ. ಗಡದ್ ಆಗಿ ಊಟ ಮಾಡಿ ನಿದ್ದೆ ಮಾಡ್ಕೊಂಡು ಇರ್ತಿದ್ರಾ?
ನಾನು ಸಿಎಂ ಆದ ನಂತರ ನನಗೆ ಸರ್ಕಾರಿ ಬಂಗಲೆ ಕೊಡಲಿಲ್ಲ. ನೀವು ಸರ್ಕಾರ ತೆಗಿತೀರಾ ಅಂತಾ ನನಗೆ ಗೊತ್ತಿತ್ತು. ಅದಕ್ಕೆ ನಾನು ಸರ್ಕಾರಿ ಕಾರು ಕೂಡ ತಗೊಳಿಲ್ಲ. ನಿಮ್ಮ ನಡವಳಿಕೆಯಿಂದ ಧರಂಸಿಂಗ್ ಸರ್ಕಾರ ಹೋಯ್ತು ಎಂದು ಪದೇಪದೆ ಮಾತಿನ ಉದ್ದಕ್ಕೂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.