ರಾಮನಗರ : ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಜನತೆ ಕಾಡಾನೆ ದಾಳಿಗೆ ನಲುಗಿ ಹೋಗುತ್ತಿದ್ದಾರೆ. ರಾತ್ರಿ ವೇಳೆ ಈ ಗ್ರಾಮಕ್ಕೆ ಬರುವ ಕಾಡಾನೆಗಳು ದಾಳಿ ನಡೆಸುತ್ತಿವೆ. ನಿನ್ನೆ ರಾತ್ರಿ ಕೂಡ ಗ್ರಾಮದ ಪುಟ್ಟರಾಜು, ನಾಗರಾಜ್, ಮಲ್ಲಯ್ಯ ಅವರಿಗೆ ಸೇರಿದ ಬೆಳೆಯನ್ನು ಕಾಡಾನೆಗಳು ಹಾನಿಗೊಳಿಸಿವೆ.
ಪದೇಪದೆ ಕಾಡಿನಿಂದ ಆನೆಗಳ ಹಿಂಡು ನಾಡಿಗೆ ಬರುತ್ತವೆ. ಇವುಗಳನ್ನು ಕಾಡಿಗೆ ಕಳುಹಿಸುವುದರೊಳಗೆ ಆನೆಗಳು ನೂರಾರು ಬಾಳೆಗಿಡ, ಮಾವಿನ ಮರ ನಾಶ ಪಡಿಸುತ್ತವೆ. ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದಿರುವ ಈ ಆನೆಗಳ ಹಿಂಡು ಕಬ್ಬಾಳು ವಲಯದಲ್ಲಿ ಬೀಡು ಬಿಟ್ಟಿವೆ.
ಓದಿ:ಮಾರುಕಟ್ಟೆಯಲ್ಲಿ ಹುಣಸೆ ಬೆಲೆ ಡಿಢೀರ್ ಕುಸಿತ: ಬೆಳೆಗಾರರಿಗೆ ಹುಳಿ ಹಿಂಡಿದ ಹುಣಸೆ
ಆನೆಗಳ ದಾಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಇನ್ನೇನು ಬೆಳೆ ಕೈಗೆಟುವ ಮುನ್ನವೇ ಆನೆಗಳು ದಾಳಿ ನಡೆಸಿ ಬೆಳೆ ನಾಶ ಮಾಡಿವೆ. ಪದೇಪದೆ ಆನೆಗಳ ದಾಳಿಯಿಂದ ಗ್ರಾಮಸ್ಥರು ನಲುಗಿದ್ದಾರೆ. ಈಗಲಾದ್ರೂ ಅರಣ್ಯಾಧಿಕಾರಿಗಳು ಆನೆಗಳು ದಾಳಿ ನಡೆಸದಂತೆ ಶಾಶ್ವತವಾಗಿ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.