ರಾಮನಗರ: ಡಿ.ಕೆ.ಬ್ರದರ್ಸ್ ಆಪ್ತ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್‌ಗೆ ಜಾರಿ ನಿರ್ದೇಶನಾಲಯ ಮತ್ತೆ ಸಮನ್ಸ್ ಜಾರಿ ಮಾಡಿದ್ದು, ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಆಪ್ತರಾದ ಇಕ್ಬಾಲ್ ಈಗಾಗಲೇ ಸೆ.17 ಹಾಗೂ ಅ.1 ರಂದು ಎರಡು ಬಾರಿ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಮೊದಲ ವಿಚಾರಣೆ ಸಂದರ್ಭ ಇಡಿ ಅಧಿಕಾರಿಗಳು ಕಳೆದ 10 ವರ್ಷದಲ್ಲಿನ ಆದಾಯದ ಮೂಲ ಹಾಗೂ ಬ್ಯಾಂಕ್ ವಿವರ ಒದಗಿಸುವಂತೆ ಸೂಚಿಸಿದ್ದರು. ಅದರಂತೆ ಎರಡನೇ ವಿಚಾರಣೆ ಸಂದರ್ಭ ಅಗತ್ಯ ದಾಖಲೆಗಳನ್ನು ಅವರು ಅಧಿಕಾರಿಗಳ ಮುಂದೆ ಇಟ್ಟಿದ್ದರು. ಅದರಲ್ಲಿ ಕೆಲವು ಸ್ಪಷ್ಟನೆ ಬಯಸಿ ಮೂರನೇ ವಿಚಾರಣೆಗೆ ಸಮನ್ಸ್ ನೀಡಿದ್ದಾರೆ ಎಂದು ಹೇಳಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬದೊಂದಿಗೆ ಇಕ್ಬಾಲ್ ಹಣಕಾಸು ವ್ಯವಹಾರ ಹೊಂದಿದ್ದರು. 2018 ರ ವಿಧಾನಸಭೆ ಚುನಾವಣೆ ಸಂದರ್ಭ ಡಿಕೆಶಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಪುತ್ರಿ ಐಶ್ವರ್ಯಗೆ ಇಕ್ಬಾಲ್ ವೈಯಕ್ತಿಕವಾಗಿ 11.75 ಕೋಟಿ ರೂ. ಸಾಲ ಹಾಗೂ ಅವರು ಪಾಲುದಾರಿಕೆ ಹೊಂದಿರುವ ಎನ್ಎಂ ಗ್ರಾನೈಟ್ಸ್‌ನಿಂದ 1.25 ಕೋಟಿ ರೂಪಾಯಿ ಸಾಲ ನೀಡಿರುವುದಾಗಿ ಘೋಷಿಸಿದ್ದರು. ಈ ಸಂಬಂಧ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಆದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಇಕ್ಬಾಲ್ ಹುಸೇನ್ ಪ್ರಾಥಮಿಕ ಸಂಪರ್ಕಿತರಾಗಿರುವ ಕಾರಣ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಹೀಗಾಗಿ ವಿಚಾರಣೆಗೆ ಕಾಲಾವಕಾಶ ಕೊಡುವಂತೆ ಕೋರಿದ್ದಾರೆ. ಇಡಿ ಅಧಿಕಾರಿಗಳಿಗೆ ಈ ಸಂಬಂಧ ಇ-ಮೇಲ್ ಮೂಲಕ ಮನವಿ ಮಾಡಿದ್ದೇನೆ. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.