ರಾಮನಗರ: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ವತಿಯಿಂದ ಇ-ಡ್ರೈವ್ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಇ-ಡ್ರೈವ್ ವ್ಯವಸ್ಥೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ ವತಿಯಿಂದ ಗ್ರಾಮೀಣ, ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಯುವಕರನ್ನ ವಿಶ್ವ ದರ್ಜೆಯ ಉದ್ಯೋಗ ತಂತ್ರಜ್ಞರನ್ನಾಗಿ ಪರಿವರ್ತಿಸುವ ಸಲುವಾಗಿ ನೂತನ ಇ-ಡ್ರೈವ್ ಲೈನ್ ತಂತ್ರಜ್ಞಾನವನ್ನ ಪ್ರಥಮ ಬಾರಿಗೆ ಅಳವಡಿಸಿಕೊಳ್ಳಲಾಗಿದೆ. ಈ ಸಂಸ್ಥೆಯ 2ನೇ ಹಂತ ವಿಸ್ತರಣೆಗೆ ಇಂದು ಭೂಮಿಪೂಜೆ ಸಹ ಮಾಡಲಾಯಿತು.
ಈ ಹೊಸ ಕಾರ್ಯಕ್ರಮಗಳು ವಿಶ್ವ ದರ್ಜೆಯ ಮಾನವ ಸಂಪನ್ಮೂಲವನ್ನ ಹೆಚ್ಚಿಸುವುದಲ್ಲದೆ ದೊಡ್ಡ ಸಾಮಾಜಿಕ ಅಭಿವೃದ್ಧಿಯನ್ನ ಉತ್ತೇಜಿಸುತ್ತವೆ. ಇದಲ್ಲದೆ ಸುಸ್ಥಿರ ಬೆಳವಣಿಗೆಗಳ ಜೊತೆಗೆ ಕರ್ನಾಟಕವನ್ನ ಜಾಗತಿಕ ಪೂರೈಕೆ ಸರಪಳಿಯ ಕೇಂದ್ರವಾಗಿ ಸ್ಥಾಪಿಸುವ ಗುರಿಯನ್ನ ಕರ್ನಾಟಕ ಸರ್ಕಾರ ಈಗಾಗಲೇ ಹೊಂದಿದೆ. ಈ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಟೊಯೋಟಾ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾವು ನಂಬಿದ್ದೇವೆ. ಈ ನಿಟ್ಟಿನಲ್ಲಿ ಸಂಸ್ಥೆ ಕಾರ್ಯೋನ್ಮುಖವಾಗಲಿ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಬಿಜೆಪಿ ಯಾರನ್ನೂ ಮುಗಿಸಲು ಹೊರಟಿಲ್ಲ: ಸಚಿವ ಅಶ್ವತ್ಥನಾರಾಯಣ
ಇದಲ್ಲದೆ ಮುಂದಿನ ದಿನಗಳಲ್ಲಿ ಹಾರೋಹಳ್ಳಿ ಹಾಗೂ ಬಿಡದಿಯನ್ನ ಸ್ಮಾರ್ಟ್ ಸಿಟಿಯನ್ನಾಗಿ ಘೋಷಣೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರ ಈ ಭಾಗದ ಸರ್ವಾಗೀಣ ಅಭಿವೃದ್ಧಿ ಮಾಡಲಾಗುವುದು ಎಂದು ಸಚಿವರು ಇದೇ ವೇಳೆ ತಿಳಿಸಿದರು.