ರಾಮನಗರ: ದೇವರಿಗೆ ಗುಡಿ ಕಟ್ಟಿ ಪೂಜೆ ಮಾಡೋದು ಸರ್ವೇ ಸಾಮಾನ್ಯ. ಆದರೆ, ನಂಬಿಕಸ್ತ ಶ್ವಾನಗಳಿಗೆ ಗುಡಿ ಕಟ್ಟಿಸಿ ಪೂಜೆ ಸಲ್ಲಿಸುವುದನ್ನ ನೀವು ಎಲ್ಲಾದರೂ ನೋಡಿದ್ದೀರಾ...ಹೌದು, ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಎ.ವಿ ಹಳ್ಳಿ ಗ್ರಾಮದಲ್ಲಿ ದೇವರಿಗೂ ಮೊದಲು ನಾಯಿಗಳಿಗೆ ವಿಶೇಷ ಮೊದಲ ಪೂಜೆ ಮಾಡಲಾಗುತ್ತದೆ.
ಇದನ್ನೂ ಓದಿ: ನಿಯತ್ತಿನ ಶ್ವಾನಕ್ಕೆ ಗುಡಿ ಕಟ್ಟಿ ನಿತ್ಯ ಪೂಜೆ.. ರಾಣೇಬೆನ್ನೂರಿನಲ್ಲೊಬ್ಬ ವಿಶೇಷ ಪ್ರಾಣಿಭಕ್ತ!!
ಹಿನ್ನೆಲೆ ಹೀಗಿದೆ..: ಎ.ವಿ ಹಳ್ಳಿ ಗ್ರಾಮದಲ್ಲಿರುವ ಕೃತಜ್ಞತಾ ಮನೋಭಾವದ ನಾಯಿಗೊಸ್ಕರವೇ ಕಟ್ಟಿರುವ ವಿಶೇಷ ದೇವಸ್ಥಾನ. ನಾಯಿಗಳಿಗಾಗಿಯೇ ಇಲ್ಲಿಯ ಗ್ರಾಮಸ್ಥರು ಗುಡಿಯೊಂದನ್ನ ಕಟ್ಟಿಸಿ ಪ್ರತಿದಿನ ವಿಶೇಷ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಹಿನ್ನೆಲೆಯೂ ಇದೆ. ಈ ಹಿಂದೆ ಕುರಿ ಕಾಯುವ ಸಂದರ್ಭದಲ್ಲಿ ಕುರಿಗಳ ರಕ್ಷಣೆಗಾಗಿ ಕುರುಬರು ತಮ್ಮ ಜೊತೆಗೆ ನಾಯಿಗಳನ್ನು ಹಿಡಿದುಕೊಂಡು ಬರುತ್ತಿದ್ದರು. ಪ್ರತಿ ಕುರುಬರು ಕೂಡ ತಮ್ಮ ಹಾಗೂ ಕುರಿಗಳ ರಕ್ಷಣೆಗಾಗಿ ನಾಯಿಗಳನ್ನ ಕರೆದುಕೊಂಡು ಬರೋದು ಈಗಲೂ ಕೂಡ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಅದರಂತೆ ಈ ಗ್ರಾಮಕ್ಕೂ ಬಹಳ ವರ್ಷಗಳ ಹಿಂದೆ ಬರಲಾಯಿತು.
ಹೀಗೆ ಮಂದೆ ಕುರಿ ಸಾಕಾಣಿಕೆಯ ಸಂದರ್ಭದಲ್ಲಿ ಈ ಗ್ರಾಮದಲ್ಲಿ ಬೀಡು ಬಿಟ್ಟ ನಾಯಿಗಳೆಲ್ಲ ಆಶ್ಚರ್ಯಕರ ರೀತಿಯಲ್ಲಿ ಕಾಣೆಯಾಗುತ್ತಿದ್ದವು. ನಾಯಿಗಳು ಕಾಣೆಯಾಗುತ್ತಿರುವುದರ ರಹಸ್ಯವನ್ನ ಬೆನ್ನಟ್ಟಿದ ಇಲ್ಲಿಯ ಗ್ರಾಮಸ್ಥರು ಗ್ರಾಮದಲ್ಲಿನ ಶಕ್ತಿ ದೇವತೆ ವೀರಮಾಸ್ತಿ ಕೆಂಪಮ್ಮ ದೇವರ ಮೊರೆ ಹೋದರು. ಈ ಸಂದರ್ಭದಲ್ಲಿ ದೇವರು ಹೇಳಿದಂತೆ ಕಾಡಿನಲ್ಲಿರುವ ನನ್ನ ದೇಗುಲಕ್ಕೆ ದ್ವಾರ ಪಾಲಕರ ಅವಶ್ಯಕತೆ ಇದೆ. ಆದ್ದರಿಂದ ನನ್ನ ದೇಗುಲದ ಸಮೀಪದಲ್ಲಿ ನಾಯಿಗಳಿಗಾಗಿ ಗುಡಿ ಕಟ್ಟಿಸುವಂತೆ ದೇವತೆ ಆಜ್ಞೆ ಮಾಡಿದ್ದಳಂತೆ. ಹೀಗಾಗಿ ನಾಯಿಗಳ ಶ್ವಾನ ವಿಗ್ರಹ ಮಾಡಿ ಅಲ್ಲಿಯೇ ಗುಡಿ ಕಟ್ಟಿಸಿ ನಿತ್ಯ ದೇವರು ಮುನ್ನ ಈ ಶ್ವಾನಗಳಿಗೆ ಪೂಜೆ ಪೂಜೆ ಸಲ್ಲಿಸಿದ ನಂತರವೇ ಇತರ ದೇವರಿಗೆ ಪೂಜೆ ಮಾಡಲಾಗುತ್ತಿದೆ.
ರಾಜ್ಯದಲ್ಲೂ ಎಲ್ಲೂ ಇಲ್ಲದ ಶ್ವಾನ ದೇಗುಲ ಇಲ್ಲಿದೆ.. ಹಾಗೆಯೇ ಈ ಗ್ರಾಮದಲ್ಲಿ ದೇವರ ಮೊರೆ ಹೋದರೆ ಇಷ್ಟಾರ್ಥ ಈಡೇರುತ್ತೆ ಎಂಬ ನಂಬಿಕೆ ಕೂಡ ಇದೆ. ಅದರಂತೆ ವರ್ಷಕ್ಕೊಮ್ಮೆ ಈ ಗ್ರಾಮದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಬರುವ ಭಕ್ತರು ಮೊದಲಿಗೆ ಶ್ವಾನಕ್ಕೆ ನಮಸ್ಕಾರ ಮಾಡಿದ ನಂತರವೇ ವೀರಮಾಸ್ತಿ ಕೆಂಪಮ್ಮ ದೇವರ ದರ್ಶನ ಪಡೆಯುತ್ತಾರೆ. ನಿಯತ್ತಿಗೆ ಮತ್ತೊಂದು ಹೆಸರೇ ಆಗಿರುವ ನಾಯಿಗಳಿಗೂ ಈ ಗ್ರಾಮದಲ್ಲಿ ವಿಶೇಷ ಪ್ರಾಧಾನ್ಯತೆ ಸಿಕ್ಕಿರುವುದು ಮಾದರಿಯಾಗಿದೆ.
ಇದನ್ನೂ ಓದಿ: ಮೃತಪಟ್ಟ ಪ್ರೀತಿಯ ಶ್ವಾನದ ನೆನಪಿಗಾಗಿ ದೇವಾಲಯ ನಿರ್ಮಿಸಿದ ತಮಿಳುನಾಡಿನ ವ್ಯಕ್ತಿ