ರಾಮನಗರ: ಕೊರೊನಾ ಸೋಂಕಿತ ಸ್ಟಾಫ್ ನರ್ಸ್ ಹುಟ್ಟುಹಬ್ಬವನ್ನು ಆಸ್ಪತ್ರೆಯಲ್ಲಿ ಆಚರಣೆ ಮಾಡಲಾಗಿದ್ದು, ಆ ಮೂಲಕ ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸೋಂಕಿತರಿಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ.
ಜೀವದ ಹಂಗು ತೊರೆದು ಕೊರೊನಾ ವಾರಿಯರ್ಸ್ ಸೇವೆ ಸಲ್ಲಿಸುತ್ತಿದ್ದ ಸ್ಟಾಫ್ ನರ್ಸ್ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರನ್ನು ಕೋವಿಡ್-19 ರೆಫೆರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇಂದು ಸೋಂಕಿತ ನರ್ಸ್ ಅವರ ಹುಟ್ಟುಹಬ್ಬವನ್ನು ಆಸ್ಪತ್ರೆ ವೈದ್ಯರು ಸೇರಿದಂತೆ ನರ್ಸ್ಗಳು ಆಚರಿಸಿದ್ದು, ಕೊರೊನಾ ವಾರಿಯರ್ಸ್ ಗೆ ಸೋಂಕು ತಗಲುತ್ತೆ ಎಂಬ ಜಿಗುಪ್ಸೆ ಬಾರದಿರಲಿ ಎಂದು ಜಾಗೃತಿ ಮೂಡಿಸಿದ್ದಾರೆ. ಇನ್ನು ಆಸ್ಪತ್ರೆಯ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಪಿಪಿಇ ಕಿಟ್ ಧರಿಸಿ ಜಿಲ್ಲಾ ಆರೋಗ್ಯಾಧಿಕಾರಿ, ವೈದ್ಯರು ಹಾಗೂ ಸಿಬ್ಬಂದಿ ಸೇರಿದಂತೆ ಸೋಂಕಿತ ಸ್ಟಾಫ್ ನರ್ಸ್ನೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಆಚರಿಸಿದರು. ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಆತ್ಮಬಲ ಹೆಚ್ಚಿಸುವ ನಿಟ್ಟಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸುವ ಮೂಲಕ ಸಂಭ್ರಮ ಹಂಚಿಕೊಂಡಿದೆ.