ರಾಮನಗರ: ರೇಷ್ಮೆನಗರಿ ರಾಮನಗರದಿಂದ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ವಿಚಾರವಾಗಿ ಹೈಕಮಾಂಡ್ನಲ್ಲಿ ಚರ್ಚೆ ಆಗಿರೋದು ನಿಜ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ರಾಮನಗರ ಕ್ಷೇತ್ರದಿಂದ ಸಂಸದ ಡಿ.ಕೆ.ಸುರೇಶ್ ಅವರನ್ನ ನಿಲ್ಲಿಸುವಂತೆ ಬಹಳ ದಿನದಿಂದ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಂದು ಇತಿಹಾಸ ಇದೆ. ರಾಜಕೀಯ ನಾವು ಏನು ಅಂದ್ಕೊತ್ತಿವಿ ಅದೆಲ್ಲಾ ಆಗೋದಿಲ್ಲ. ಯಾವುದು ಕೂಡ ನಮ್ಮ ಕೈಯಲಿಲ್ಲ. ಯಾವ ಸಂದರ್ಭದಲ್ಲಿ ಏನ್ ಆಗಬೇಕೋ ಅದು ಆಗುತ್ತದೆ ಎಂದು ಪರೋಕ್ಷವಾಗಿ ಡಿ.ಕೆ.ಸುರೇಶ್ ಸ್ಪರ್ಧೆ ಬಗ್ಗೆ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ನಿರ್ಧಾರ ಮಾಡಲಿದೆ: ಇನ್ನು ದಿವಂಗತ ಮಾಜಿ ಸಂಸದ ಹಾಗೂ ಕೆಪಿಪಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ ಅವರ ಪುತ್ರನಿಗೆ ಟಿಕೇಟ್ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜಡ್ಜ್ ಆಗಿದ್ದಾರೆ. ನಾನು ಧ್ರುವನಾರಾಯಣ ಪುತ್ರ ದರ್ಶನ ಪರ ವಕೀಲನಾಗಿದ್ದೇನೆ. ಧ್ರುವನಾರಾಯಣ ಅವರ ಅಂತಿಮ ದರ್ಶನ ಪಡೆಯೋದಕ್ಕೆ ಸ್ವತಃ ಮಲ್ಲಿಕಾರ್ಜುನ್ ಖರ್ಗೆ ಬಂದಿದ್ದರು. ಅಭಿಮಾನಿಗಳ ಆಕ್ರಂದನ ಸ್ವತಃ ನೋಡಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಧ್ರುವನಾರಾಯಣ ಪರ್ಯಾಯ ನಾಯಕ ಇಲ್ಲ. ಹಳೇ ಮೈಸೂರು ಭಾಗದಲ್ಲಿ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದರು. ಅವರು ನನ್ನ ತಮ್ಮನ ಹಾಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂದು ಹೇಳಿದರು.
ಇದನ್ನೂ ಓದಿ: ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಯಾರೇ ಸ್ಪರ್ಧಿಸಿದರೂ ಸ್ವಾಗತ : ಹೆದರಿಕೆ, ಆತಂಕ ಇಲ್ಲವೆಂದ ಇಬ್ರಾಹಿಂ
ಬೇರೆ ಪಕ್ಷದ ಬಗ್ಗೆ ಮಾತನಾಡುವ ಸೂಕ್ತ ವ್ಯಕ್ತಿ ನಾನಲ್ಲ: ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಅವರ ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ರಾಮನಗರ ಕ್ಷೇತ್ರದಿಂದ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ವಿಚಾರವಾಗಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಇಬ್ರಾಹಿಂ ಹಾಗೂ ದೇವೇಗೌಡರು ನನಗೆ ಅವಕಾಶ ಕೊಟ್ಟಿದ್ದಾರೆ. ನನ್ನ ಪಕ್ಷದ ಬಗ್ಗೆ ನಾನು ಮಾತನಾಡಬಹುದು. ಆದರೆ, ಬೇರೆ ಪಕ್ಷದ ಬಗ್ಗೆ ಮಾತನಾಡುವ ಸೂಕ್ತ ವ್ಯಕ್ತಿ ನಾನಲ್ಲ. ಸೋಲಿಸೋದು, ಟಾರ್ಗೆಟ್ ಮಾಡೋದು ನಮ್ಮ ಕೈಯಲ್ಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
1994ರಲ್ಲಿ ರಾಮನಗರ ಕ್ಷೇತ್ರದ ಜನತೆ ದೇವೇಗೌಡರನ್ನ ಆಯ್ಕೆ ಮಾಡಿದ್ದರು. 2004 ರಲ್ಲಿ ಕುಮಾರಸ್ವಾಮಿ ಅವರನ್ನ ಗೆಲ್ಲಿಸಿದ್ದರು. ಅಲ್ಲಿಂದ ಸತತವಾಗಿ ನಾವು ರಾಮನಗರದಲ್ಲಿ ಗೆಲುವು ಸಾಧಿಸಿದ್ದೇವೆ. ಕುಮಾರಸ್ವಾಮಿ ರಾಮನಗರವನ್ನು ಜಿಲ್ಲೆ ಮಾಡಿದರು. ಅಭಿವೃದ್ಧಿ ವಿಚಾರದಲ್ಲಿ ನಾವು ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿಲ್ಲ. ನಮ್ಮ ಸೇವೆಯನ್ನ ಜನ ಗುರುತಿಸಿದ್ದಾರೆ. ಮಂಡ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ರೈತಸಂಘ ಸೇರಿ ನನಗೆ ಚಕ್ರವ್ಯೂಹ ಮಾಡಿ ಸೋಲಿಸಿದ್ದರು. ಟೆಕ್ನಿಕಲ್ ಆಗಿ ಸೋತಿದ್ದೆ ಆದರೆ 5 ಲಕ್ಷಕ್ಕೂ ಅಧಿಕ ಮತ ಪಡೆದಿದ್ದೇನೆ ಎಂದು ಹೇಳಿದರು.
ರಾಮನಗರದಲ್ಲೂ ಕೂಡ ಆ ರೀತಿಯ ಸಂಚು ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಎರಡು ಒಗ್ಗಟ್ಟಾಗಿ ರಾಜಕೀಯ ಲೆಕ್ಕಾಚಾರ ಮಾಡುತ್ತಿದ್ದಾರೆ. ಆದರೆ, ಅಂತಿಮ ತೀರ್ಮಾನ ಮತದಾರರು ಮಾಡುತ್ತಾರೆ. ಜನ ನನಗೆ ಹಾಲು ಕೊಡ್ತಾರಾ ಅಥವಾ ವಿಷ ಕೊಡ್ತಾರಾ ಅದು ಅವರಿಗೆ ಬಿಟ್ಟಿದ್ದು ಎಂದು ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.