ರಾಮನಗರ: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಿನ್ನೆ ಶುಕ್ರವಾರ ರಾಮನಗರ ಜಿಲ್ಲೆ ಕನಕಪುರದ ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರಕ್ಕೆ ದಿಢೀರ್ ಭೇಟಿ ಕೊಟ್ಟು ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದರು. ರಾಮನಗರ ಜಿಲ್ಲೆಯ ಕನಕಪುರದ ಎಸ್ ಎಲ್ ಎನ್ ರಸ್ತೆಯ ಕರ್ನಾಟಕ ಒನ್ ಕೇಂದ್ರಕ್ಕೆ ಶುಕ್ರವಾರ ಸಂಜೆ ಭೇಟಿ ಕೊಟ್ಟಾಗ ಅಲ್ಲಿನ ಸಿಬ್ಬಂದಿ ಒಂದು ಕ್ಷಣ ಅವಕ್ಕಾದರು. ತಮ್ಮ ಹೆಸರು ನೋಂದಣಿ ಮಾಡಲು ಬಂದಿದ್ದ ಮಹಿಳೆಯರು ಕೂಡ ಸೇವಾ ಕೇಂದ್ರದಲ್ಲಿ ಡಿಸಿಎಂ ಅವರನ್ನು ಕಂಡು ಆಶ್ಚರ್ಯಚಕಿತರಾದರು.
ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯನ್ನು ಹೇಗೆ ಮಾಡಲಾಗುತ್ತಿದೆ? ಅಲ್ಲಿನ ಸಿಬ್ಬಂದಿ ಏನಾದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರಾ? ವಿಳಂಬ ಮಾಡುತ್ತಿದ್ದಾರಾ? ಕುಂಟು ನೆಪ ಹೇಳುತ್ತಿದ್ದಾರಾ? ಮನೆ ಯಜಮಾನಿಯರಿಗೆ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಾ? ನೋಂದಣಿ ಪ್ರಕ್ರಿಯೆ ಸರಳವಾಗಿದೆಯಾ ಎಂಬುದರ ಬಗ್ಗೆ ನೋಂದಣಿದಾರರಿಂದಲೇ ಖುದ್ದು ಮಾಹಿತಿ ಪಡೆದರು.
ಅಗತ್ಯ ದಾಖಲೆ ಸಲ್ಲಿಸಲು ತನಗಿರುವ ವೈಯಕ್ತಿಕ ತಾಂತ್ರಿಕ ತೊಡಕು ಬಗ್ಗೆ ಮಹಿಳೆಯೊಬ್ಬರು ನೀವೇದಿಸಿಕೊಂಡಾಗ ಅದಕ್ಕೆ ಪರಿಹಾರವನ್ನು ಡಿಸಿಎಂ ಅವರು ಸೂಚಿಸಿದರು. ಸಿಬ್ಬಂದಿ ಜತೆ ಕಂಪ್ಯೂಟರ್ ಮುಂದೆ ಕುಳಿತು ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದರು. ಕೆಲವು ಮಹಿಳೆಯರಿಗೆ ನೋಂದಣಿ ಪತ್ರವನ್ನೂ ವಿತರಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ: ಸರ್ವರ್ ಸಮಸ್ಯೆಯಿಂದ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಪರದಾಟ.. 2 ದಿನದಲ್ಲಿ ಕೇವಲ 2 ಸಾವಿರ ಅರ್ಜಿ ಸಲ್ಲಿಕೆ
ಜುಲೈ 20 ಕ್ಕೆ ನೋಂದಣಿಗೆ ಚಾಲನೆ, ಆಗಸ್ಟ್ 16 ಕ್ಕೆ ಹಣ ಜಮೆ: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಮುಖ್ಯವಾದ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯಿಗೆ 19 ರ ಬುಧವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೆ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ ನೀಡಿದ್ದರು. ಈ ಯೋಜನೆಯಿಂದ ರಾಜ್ಯದ ಪ್ರತಿ ಕುಟುಂಬದಲ್ಲಿನ ಯಜಮಾನಿ ಮಹಿಳೆಯು ಪ್ರತಿ ತಿಂಗಳಿಗೆ 2 ಸಾವಿರ ರೂ.ನಂತೆ ವರ್ಷಕ್ಕೆ 24 ಸಾವಿರ ರೂ. ಗಳನ್ನು ಪಡೆಯಲಿದ್ದಾರೆ. 1.28 ಕೋಟಿ ಮಹಿಳೆಯರ ಕುಟುಂಬಕ್ಕೆ ಇದರ ಪ್ರಯೋಜನ ದೊರೆಯಲಿದೆ. ಆ.16ರಿಂದ ಯಜಮಾನಿಯ ಖಾತೆಗೆ 2,000 ರೂ. ಜಮೆಯಾಗಲಿದೆ.
ಸರ್ವರ್ ಸಮಸ್ಯೆಗೆ ಜನ ಆಕ್ರೋಶ: ಇನ್ನು ಚಾಲನೆ ದೊರೆತ ದಿನದಿಂದಲೇ ರಾಜ್ಯದ ಜನತೆ ಯೋಜನೆಯ ಫಲವನ್ನು ಪಡೆಯಲು ಬೆಳಗ್ಗೆ ಸಂಜೆಯೆನ್ನದೇ ಸೇವಾ ಕೇಂದ್ರಗಳಲ್ಲಿ ಸಾಲು ಸಾಲು ಕ್ಯೂ ನಿಲ್ಲುತ್ತಿದ್ದಾರೆ. ಕೆಲವೆಡೆ ಸರ್ವರ್ ಬ್ಯುಸಿ ಪ್ರಾಬ್ಲಂ ಉಂಟಾದರೆ, ಇನ್ನು ಕೆಲವೆಡೆ ಸೇವಾ ಕೇಂದ್ರಗಳ ಕೊರತೆಯಿಂದ, ಖಾಸಗಿ ಸೈಬರ್ಗಳಲ್ಲಿಯೂ ನೋಂದಣಿಗೆ ಅವಕಾಶ, ಇಲ್ಲದಿದ್ದರೆ ಸರ್ಕಾರಿ ಸೇವಾ ಕೇಂದ್ರವನ್ನು ಹೆಚ್ಚಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಮಹತ್ವದ ಗ್ಯಾರಂಟಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಸೇವಾಕೇಂದ್ರಗಳ ಕೊರತೆ.. ದಿನವಿಡಿ ಕ್ಯೂ ನಲ್ಲಿ ನಿಂತು ಸುಸ್ತಾದ ಹಾವೇರಿ ಮಂದಿ-ವಿಡಿಯೋ