ರಾಮನಗರ: ರಾಗಿ ಕೊಳ್ಳುವಾಗ ನಮ್ಮ ರಾಗಿಯನ್ನು ಕೊಳ್ಳಲಿಲ್ಲ ಎಂದು ಕುಪಿತಗೊಂಡ ಸಹೋದರರು ವೃದ್ಧನೋರ್ವನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸೀಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೃದ್ಧ ವೆಂಕಟಸ್ವಾಮಯ್ಯ (65) ಕೊಲೆಯಾದವರು ಎಂದು ಹೇಳಲಾಗಿದೆ. ಇವರು ತಮ್ಮ ಮಗಳ ಮನೆಗೆ ರಾಗಿ ಖರೀದಿ ಮಾಡಲು ಸೀಬನಹಳ್ಳಿಗೆ ಹೋಗಿದ್ದಾರೆ. ಈ ಗ್ರಾಮದ ಸಹೋದರರಾದ ಶಿವರಾಜು, ಭೈರವ ಎಂಬುವರ ಬಳಿ ರಾಗಿ ಕೊಳ್ಳಲು ಅದರ ಗುಣಮಟ್ಟವನ್ನು ನೋಡಿದ ವೆಂಕಟಸ್ವಾಮಯ್ಯ, ರಾಗಿ ಹಸನಿಲ್ಲದ ಕಾರಣ ಮತ್ತೊಬ್ಬರ ರಾಗಿ ನೋಡಲು ಹೋಗಿದ್ದಾರೆ. ಇದೇ ಈ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ.
ಓದಿ: ಮ್ಯಾನ್‍ಹೋಲ್ ದುರಂತ ಸಂಭವಿಸಿದರೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ: ಶಿವಮೊಗ್ಗ ಡಿಸಿ
ಸಹೋದರರ ರಾಗಿಯನ್ನು ನೋಡಿ ಮತ್ತೊಬ್ಬರ ರಾಗಿಯನ್ನು ನೋಡಲು ಹೋಗುತ್ತಿದ್ದ ವೃದ್ಧನ ಜೊತೆ ವಾಗ್ವಾದಕ್ಕಿಳಿದ ಶಿವರಾಜು, ಭೈರವ, ವೃದ್ಧನ ಕಪಾಳಕ್ಕೆ ಹೊಡೆದಿದ್ದಾರೆ. ಪರಿಣಾಮ ಆತ ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದ್ದಾನೆ. ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.