ರಾಮನಗರ: ಕೊರೊನಾ, ಲಾಕ್ಡೌನ್ ನಡುವೆಯೂ ಕೊಳಗೊಂಡನಹಳ್ಳಿ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವ ತಡೆಯದೆ, ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೂ ತರದೆ ಕರ್ತವ್ಯಲೋಪ ಎಸಗಿದ ಆರೋಪದಡಿ ಬನ್ನಿಮುಕ್ಕೋಡ್ಲು ಕಂದಾಯ ವೃತ್ತ ಗ್ರಾಮ ಲೆಕ್ಕಿಗನನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಆದೇಶ ಹೊರಡಿಸಿದ್ದಾರೆ.
ಕನಕಪುರ ತಾಲೂಕಿನ ಕೊಳಗೊಂಡನಹಳ್ಳಿಯಲ್ಲಿ ಜನಸಂದಣಿ ಸೇರಿ ಜಾತ್ರಾ ಮಹೋತ್ಸವವನ್ನು ಆಚರಿಸಿದ್ದು, ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ವಿಚಾರ ತಿಳಿದರೂ ಅಲ್ಲಿನ ಗ್ರಾಮ ಲೆಕ್ಕಿಗ ಕಲ್ಮಟ್ ಎನ್.ಸಿ. ಯಾವುದೇ ರೀತಿ ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲದೆ ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೂ ತರದೆ ಕರ್ತವ್ಯಲೋಪ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಬೇಕೆಂದು ಶಿಫಾರಸು ಮಾಡಿ, ಸ್ಥಳ ತಿನಿಖಾ ಟಿಪ್ಪಣಿಯೊಂದಿಗೆ ಕನಕಪುರ ತಹಶೀಲ್ದಾರ್ ವರ್ಷಾ ಅವರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.
ಈ ಕುರಿತಂತೆ ಕ್ರಮ ಕೈಗೊಂಡಿರುವ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 10(1) ರಂತೆ ಅಧಿಕಾರವನ್ನು ಚಲಾಯಿಸಿ ಗ್ರಾಮ ಲೆಕ್ಕಿಗ ಕಲ್ಮಟ್ ಅವರನ್ನು ಸರ್ಕಾರಿ ಸೇವೆಯಿಂದ ಅಮಾತುಗೊಳಿಸಿ ಆದೇಶ ಹೊರಡಿಸಿದ್ದಾರೆ.