ರಾಮನಗರ : ಕೇಂದ್ರದ ಬಿಜೆಪಿ ಸರ್ಕಾರ 1 ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಆದರೆ ನಮಗಿದು ಅತ್ಯಂತ ಕರಾಳ ದಿನವಾಗಿದೆ ಎಂದು ಸಂಸದ ಡಿ.ಕೆ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕಚೇರಿಯಲ್ಲಿ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ದೇಶದ ಜನರ ಪರವಾಗಿ ಕೇಂದ್ರ ಸರ್ಕಾರ ಕೆಲಸ ಮಾಡಿಲ್ಲ. ದೇಶದ ಜಿಡಿಪಿ 2.5 - 3 % ರಷ್ಟು ಕುಸಿದಿರುವುದು ವಾಸ್ತವವಾಗಿದೆ. ಆದರೆ ಬಿಜೆಪಿಯವರು ಅದನ್ನು ತಿರುಚಿದ್ದಾರೆ. ದೇಶದ ಆರ್ಥಿಕ ವೃದ್ಧಿ ದರ ಶೇ 4.3 ಎಂದು ಜನರಿಗೆ ಸುಳ್ಳು ಹೇಳ್ತಿದ್ದಾರೆ. ಬಹುಶಃ 2ನೇ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ದೇಶದ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಜನರ ನಿರೀಕ್ಷೆಯ ಮಟ್ಟ ತಲುಪುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಕೊರೊನಾ ಸಂದರ್ಭವನ್ನ ಸರಿಯಾಗಿ ನಿರ್ವಹಣೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿತ್ತು ಎಂದರು.
'ಬಿಜೆಪಿ ಅದಾಗಿಯೇ ಅಧಿಕಾರ ಕಳೆದುಕೊಂಡ್ರೆ ನಾವೇನು ಮಾಡೋಣ'
ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಬೇರುಮಟ್ಟದಿಂದ ಪಕ್ಷ ಕಟ್ಟುತ್ತೇವೆ. ಬಿಜೆಪಿ ಸರ್ಕಾರಕ್ಕೆ ನಮ್ಮಿಂದ ಯಾವ ಸಮಸ್ಯೆಯೂ ಇಲ್ಲ, ಬಿಜೆಪಿ ಶಾಸಕರ ಅಸಮಾಧಾನ ವಿಚಾರ ನಮಗೆ ಬೇಡ. ಆದರೆ ಈ ಸರ್ಕಾರ 1 ವರ್ಷ, 2 ವರ್ಷ, ಅಥವಾ 3 ವರ್ಷ ಇರುತ್ತೋ ಗೊತ್ತಿಲ್ಲ. ಅದಾಗಿಯೇ ಅಧಿಕಾರ ಕಳೆದುಕೊಂಡ್ರೆ ನಾವೇನು ಮಾಡೋಣ ಎಂದು ಎಚ್ಚರಿಸಿದ್ದಾರೆ.