ರಾಮನಗರ: ಬಿಡುವಿಲ್ಲದ ರಾಜಕೀಯ ಜಂಜಾಟ ನಡುವೆಯೂ ಕಾವೇರಿ ನದಿಯಲ್ಲಿ ಮಿಂದು, 40 ವರ್ಷದ ಹಿಂದೆ ತಮ್ಮ ತಂದೆಯೊಂದಿಗೆ ಕಳೆದ ಬಾಲ್ಯದ ಮಧುರ ನೆನಪನ್ನು ಮೆಲುಕು ಹಾಕುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಪ್ಪಂದಿರ ದಿನದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಅದು ವೈರಲ್ ಆಗಿದೆ.
ಕಾಂಗ್ರೆಸ್ ಟ್ರಬಲ್ ಶೂಟರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂರ್ಯಗ್ರಹಣದಂದು ಕುಟುಂಬ ಸಮೇತರಾಗಿ ಹುಟ್ಟೂರು ದೊಡ್ಡ ಆಲನಹಳ್ಳಿಯ ಸಮೀಪದ ಕಾವೇರಿ ನದಿಯಲ್ಲಿ ಈಜಾಡಿದ್ದಾರೆ. ಆ ಮೂಲಕ ಬಾಲ್ಯದಲ್ಲಿ ಕಾವೇರಿ ನದಿ ತಟದಲ್ಲಿ ತಂದೆಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ನೆನಪು ಮಾಡಿಕೊಂಡು 'ಅಪ್ಪಂದಿರ ದಿನ'ದಂದೇ ಭಾವನಾತ್ಮಕವಾಗಿ ಕೆಲವು ಮನದಾಳದ ಮಾತುಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಭಾನುವಾರ ಸಂಜೆ 4:30ಕ್ಕೆ ನಮ್ಮ ಹಳ್ಳಿಯ ಬಳಿ ಕಾವೇರಿ ನದಿಯಲ್ಲಿ ಈಜಾಡಿ ನಾನು ಕೆಲ ಸಮಯ ಕಳೆದದ್ದು ನಿಜಕ್ಕೂ ಸಂತಸ ನೀಡಿದೆ. ನನ್ನ ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ನಾನು ನನ್ನ ತಂದೆಯೊಂದಿಗೆ ಇದೇ ಸ್ಥಳದಲ್ಲಿ ಮೀನು ಹಿಡಿಯುತ್ತಿದ್ದ ಮತ್ತು ನದಿಯಲ್ಲಿ ಈಜಾಡುತ್ತಿದ್ದ ಕ್ಷಣಗಳು ಮತ್ತೊಮ್ಮೆ ಕಣ್ಣ ಮುಂದೆ ಹಾದುಹೋದವು ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.
ಸೂರ್ಯ ಗ್ರಹಣ ಮುಗಿದ ನಂತರ, ನದಿಯಲ್ಲಿ ಮಿಂದು ತಮ್ಮ ಕುಟುಂಬದೊಂದಿಗೆ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಪುತ್ರ ಆಕಾಶ್, ಮಡದಿ ಉಷಾ ಜೊತೆಗಿದ್ದರು.