ರಾಮನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರ ಕುರಿತು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತು ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದಷ್ಟು ರಾಜಕೀಯ ಬದಲಾವಣೆ ಆಗಬೇಕು. ಮುಂದೆ ಒಂದಷ್ಟು ಬದಲಾವಣೆ ಜೊತೆಗೆ ಚುನಾವಣೆ ಎದುರಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಆಗಬಹುದು. ಇತ್ತೀಚಿನ ರಾಜಕೀಯ ಚರ್ಚೆ ಹಾಗೂ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಹೀಗಾಗಿ ಮೈತ್ರಿ ಆಗಬಹುದು ಎಂದುಕೊಂಡಿದ್ದೇನೆ. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸಂಸದರನ್ನು ಗೆಲ್ಲಿಸಬೇಕು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದೇವೆ. ಆದರೆ, ಅಭ್ಯರ್ಥಿ ಆಯ್ಕೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು. ಒಂದು ವೇಳೆ ಹೈಕಮಾಂಡ್ ಸ್ಪರ್ಧೆ ಮಾಡು ಎಂದರೆ ನಾನು ಸ್ಪರ್ಧಿಸುತ್ತೇನೆ ಎಂದು ಯೋಗೇಶ್ವರ್ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಡಿ.ವಿ ಸದಾನಂದಗೌಡ ನೇತೃತ್ವದಲ್ಲಿ ರಾಮನಗರ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದೊಗೆ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಲೋಕಸಭಾ ಚುನಾವಣೆ ತಯಾರಿ ಬಗ್ಗೆ ಚರ್ಚೆ ಹಾಗೂ ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಲಾಯಿತು. ಪಕ್ಷ ಸಂಘಟನೆ ಕುರಿತು ಕಾರ್ಯಕರ್ತರಿಗೆ, ಮುಖಂಡರಿಗೆ ಮಾಜಿ ಸಿಎಂ ಸದಾನಂದಗೌಡ ಅವರು ಸಲಹೆ ಕೊಟ್ಟರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಂಬಂಧ ಜಿಲ್ಲಾ ಪ್ರಮುಖರ ಸಭೆ ನಡೆಸುತ್ತಿದ್ದೇವೆ. ಈ ಚುನಾವಣೆಯಲ್ಲಿ ಆದ ಹಿನ್ನಡೆ, ಸಣ್ಣಪುಟ್ಟ ವ್ಯತ್ಯಾಸಗಳ ಅವಲೋಕನ ಮಾಡಿದ್ದೇವೆ. ಎಲ್ಲವನ್ನೂ ಸರಿಪಡಿಸಿ ನಾವು ಈ ಬಾರಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೆರಡು ಮೂರು ದಿನಗಳಲ್ಲಿ ವಿಪಕ್ಷ ನಾಯಕರ ನೇಮಕ: ಪ್ರತಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು "ಕೇವಲ ನಾಯಕತ್ವ ಬದಲಾವಣೆಯೇ ಚುನಾವಣೆಯ ಫಲಿತಾಂಶ ಅಲ್ಲ. ವಿರೊಧ ಪಕ್ಷದ ನಾಯಕ ಆಯ್ಕೆಯ ವಿಳಂಬ ನಮಗೆ ಹಿನ್ನಡೆಯಲ್ಲ. ಅಧಿವೇಶನ ಪ್ರಾರಂಭವಾಗುವ ಮೊದಲು ವಿಪಕ್ಷ ನಾಯಕ ಬೇಕು. ಹಾಗಾಗಿ ಇನ್ನೆರಡು ಮೂರು ದಿನಗಳಲ್ಲಿ ಸಮರ್ಥ ವಿಪಕ್ಷ ನಾಯಕರ ನೇಮಕವಾಗುತ್ತದೆ. 13 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ, ನಾನೇ ಈ ಬಾರಿ ಚುನಾವಣೆಯನ್ನು ಗೆದ್ದಿದ್ದೇನೆ ಎಂದು ಹೇಳುವ ಡಿ.ಕೆ ಶಿವಕುಮಾರ್ ಅವರನ್ನು ಎದುರಿಸುವ ಸಮರ್ಥ ವ್ಯಕ್ತಿ ವಿಪಕ್ಷ ನಾಯಕರಾಗುತ್ತಾರೆ ಎಂದು ಸಂದಾನಂದ ಗೌಡ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ವಿಚಾರದ ಕುರಿತು ಪ್ರತಿಕ್ರಿಯಿಸುತ್ತಾ "ಈ ಬಗ್ಗೆ ನನಗೆ ಮಾಹಿತಿಲ್ಲ. ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಕೇವಲ ರಾಜ್ಯ ನಾಯಕರ ಒಂದಷ್ಟು ಅಭಿಪ್ರಾಯ, ಸಲಹೆ ಪಡೆಯುತ್ತಾರೆ. ಬಳಿಕ ಸೂಕ್ತ ತೀರ್ಮಾನ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವು 25 ಸ್ಥಾನಗಳನ್ನು ಗೆದ್ದಿದ್ದೇವೆ. ನರೇಂದ್ರ ಮೋದಿ ಅವರೇ ನಮ್ಮ ಶಕ್ತಿ. ಅವರ ನಾಯಕತ್ವ ಈ ಬಾರಿಯೂ ನಮಗೆ ಹೆಚ್ಚು ಸ್ಥಾನ ತಂದುಕೊಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ನಿರಾಕರಣೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಕುಣಿಯಲಾಗದವರು ನೆಲ ಡೊಂಕು ಎಂದರಂತೆ. ಫುಡ್ ಸೆಕ್ಯುರಿಟಿ ಆ್ಯಕ್ಟ್ ಪ್ರಕಾರ ಅಕ್ಕಿ ಪಡೆದುಕೊಳ್ಳಬೇಕು. ಕಾಂಗ್ರೆಸ್ನವರು ಯೋಜನೆ ಘೋಷಣೆಗೂ ಮೊದಲು ಮುಂದಾಲೋಚನೆ ಮಾಡಿಲ್ಲ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಅನ್ವಯ ಆಗುವ ರೀತಿ ನಿಯಮ ರೂಪಿಸಿದೆ. ಆ ನಿಯಮವನ್ನ ಎಲ್ಲರೂ ಅನುಸರಿಸಬೇಕು. ಪಿಯುಷ್ ಗೋಯಲ್ ಅವರನ್ನ ಭೇಟಿ ಮಾಡಿದರೆ ಅವರು ಮನೆಯಿಂದ ಅಕ್ಕಿ ತಂದುಕೊಡುತ್ತಾರಾ? ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಏಳು-ಬೀಳಿನ ಕತೆ ಏನು? ಮೈತ್ರಿ ಸರ್ಕಾರದ ಆಸಕ್ತಿಕರ ಸಂಗತಿ!