ರಾಮನಗರ : ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಣ್ವ ಜಲಾಶಯ ಭರ್ತಿಯಾಗಿದ್ದು, ಈ ಹಿನ್ನೆಲೆ ಕಣ್ವ ಜಲಾಶಯಕ್ಕೆ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಬಾಗಿನ ಅರ್ಪಿಸಿದ್ದಾರೆ. ಜಿಲ್ಲೆಯ ಚನ್ನಪಟ್ಟಣದ ಕಣ್ವ ಜಲಾಶಯಕ್ಕೆ ಊರಿನ ಮಹಿಳೆಯರ ಕೈಯಲ್ಲಿ ಬಾಗಿನ ಅರ್ಪಿಸಿದ್ದು, ಈ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಅವರ ಬೆಂಬಲಿಗರು ಉಪಸ್ಥಿತರಿದ್ದರು.
ಚನ್ನಪಟ್ಟಣದ ನೀರಾವರಿ ಅಭಿವೃದ್ಧಿಗೆ ನನ್ನ ಕೊಡುಗೆ : ಕ್ಷೇತ್ರದ ನೀರಾವರಿ ಅಭಿವೃದ್ಧಿಯಲ್ಲಿ ನನ್ನ ಶ್ರಮವಿದೆ. ಕಳೆದ 20 ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಕಣ್ವ ಏತನೀರಾವರಿ ಜಾರಿಗೆ ತರಬೇಕಾದರೆ ಬಹಳಷ್ಟು ಸಾಹಸ ಮಾಡಿದ್ದೇನೆ. ಇವತ್ತು ನಮ್ಮ ತಾಲೂಕು ಸಂಪೂರ್ಣ ನೀರಾವರಿ ಕ್ಷೇತ್ರವಾಗಿದೆ. ಆದ್ದರಿಂದ ಇವತ್ತು ಕ್ಷೇತ್ರದಲ್ಲಿ ರೈತರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
ಬಾಗಿನ ಅರ್ಪಣೆ ಕಾರ್ಯಕ್ರಮ : ಕಣ್ವ ಜಲಾಶಯ ಕಳೆದ ಕೆಲ ತಿಂಗಳ ಹಿಂದೆ ತುಂಬಿತ್ತು. ಆದರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಬಾಗಿನ ಅರ್ಪಣೆ ಮಾಡಲಿಲ್ಲ. ಈ ಬಾರಿಯೂ ಸಹ ಬರಲಿಲ್ಲ. ಹಾಗಾಗಿ ನಾನೇ ಬಂದು ಬಾಗಿನ ಅರ್ಪಣೆ ಮಾಡಿದ್ದೇನೆ. ಇನ್ನು ತಾಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ಅವಾಂತರ ಸಹ ಸೃಷ್ಟಿಯಾಗಿದೆ. ಅದನ್ನು ಸಹ ಗಮನಿಸಿ ಸೂಕ್ತ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಮಾಕಳಿ ಏತನೀರಾವರಿ ಯೋಜನೆ ನನ್ನ ಯೋಜನೆ ಎಂದು ಕುಮಾರಸ್ವಾಮಿ ಪದೇಪದೇ ಹೇಳುತ್ತಾರೆ. ಆದರೆ ಈ ಯೋಜನೆಗೆ ಸಂಬಂಧಿಸಿದಂತೆ ಒಂದು ಪತ್ರ ಬರೆದಿರುವ ಬಗ್ಗೆ ಕುಮಾರಸ್ವಾಮಿ ದಾಖಲೆ ಕೊಡಲಿ. ಬಳಿಕ ನಾನು ಒಪ್ಪಿಕೊಳ್ಳುತ್ತೇನೆಂದು ಯೋಗೇಶ್ವರ್ ಸವಾಲ್ ಹಾಕಿದರು. ಇನ್ನು ಈಗ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ಪ್ರಯತ್ನ ಮಾಡ್ತಿದ್ದಾರೆ ಮಾಡಲಿ ಅದು ಅವರ ಯೋಜನೆ. ಆದರೆ ಮಾಕಳಿ ನೀರಾವರಿ ಯೋಜನೆ ಸಂಪೂರ್ಣವಾಗಿ ನನ್ನ ಕಲ್ಪನೆಯೇ ಹೊರತು ಕುಮಾರಸ್ವಾಮಿಯದ್ದಲ್ಲ ಎಂದು ಹೇಳಿದರು.
ಸಿದ್ದರಾಮೋತ್ಸವ ಬಗ್ಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಸಿದ್ದರಾಮಯ್ಯರಿಗೆ 75 ವರ್ಷ ತುಂಬಿದ ಹಿನ್ನಲೆ ಅವರ ಅಭಿಮಾನಿಗಳು ಕಾರ್ಯಕ್ರಮ ಮಾಡುತ್ತಿದ್ದು, ಅವರಿಗೆ ಶುಭವಾಗಲಿ ಎಂದು ಹೇಳಿದರು.
ಇನ್ನು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆಗೆ ಪ್ರತಿಕ್ರಿಯಿಸಿದ ಅವರು, ಕಾರ್ಯಕರ್ತರಿಗೆ ನೋವಾಗಿದೆ ನಿಜ. ಅದರೆ ಅದನ್ನು ಪಕ್ಷದ ಹೈಕಮಾಂಡ್ , ವರಿಷ್ಠರು ಬಗೆಹರಿಸುತ್ತಾರೆ ಎಂದು ಹೇಳಿದರು.
ಓದಿ : ರಾಮ್ಸನ್ ಪಟ್ಟಿಗೆ ಕರ್ನಾಟಕದ ರಂಗನತಿಟ್ಟು.. ದೇಶದಲ್ಲೀಗ 64 ತಾಣಗಳಿಗೆ ಅಂತಾರಾಷ್ಟ್ರೀಯ ಮನ್ನಣೆ