ಬೆಂಗಳೂರು/ರಾಮನಗರ : ರಾಮನಗರದಲ್ಲಿ ಆಹಾರ ಸಂಸ್ಕರಣೆ ಪಾರ್ಕ್ ಹಾಗೂ ಅಂತಾರಾಷ್ಟ್ರೀಯ ರೇಷ್ಮೆ ಮಾರುಕಟ್ಟೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಜಿ ಸಿಎಂ ಹೆಚ್‌ಡಿಕೆ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ್ ಸಭೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್, ಬೈರಪಟ್ಟಣದಲ್ಲಿ ಒಟ್ಟು 40 ಎಕರೆ ಜಮೀನಿನಲ್ಲಿ ಆಹಾರ ಸಂಸ್ಕರಣೆ ಪಾರ್ಕ್ ಹಾಗೂ ಫುಡ್ ಕ್ಲಸ್ಟರ್ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಪೈಕಿ ಮೊದಲ ಹಂತವಾಗಿ 15 ಎಕರೆ ಜಮೀನಿನಲ್ಲಿ ಸಂಸ್ಕರಣೆ ಪಾರ್ಕ್ ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಇದಕ್ಕಾಗಿ ಕೇಂದ್ರ ಸರ್ಕಾರದ ನೆರವು ಕೋರಲಾಗಿದ್ದು, ಪ್ರಾಥಮಿಕ ಅನುಮೋದನೆ ಸಿಕ್ಕಿದೆ. 500 ಕೋಟಿಗಿಂತ ಹೆಚ್ಚು ಬಂಡವಾಳ ಹೂಡಿಕೆಯಾಗಲಿದೆ. ಹೂಡಿಕೆದಾರರಿಗೆ 40% ಸಬ್ಸಿಡಿಯನ್ನು ನೀಡಲಾಗುತ್ತದೆ. ತ್ವರಿತವಾಗಿ ಇದನ್ನು ಪ್ರಾರಂಭಿಸಲಾಗುತ್ತದೆ. ಅಕ್ಟೋಬರ್‌ನಲ್ಲಿ ಡಿಪಿಆರ್ ಆಗಲಿದೆ. ಡಿಸೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಗುತ್ತದೆ. ಎರಡೂ ಯೋಜನೆ ಕಾರ್ಯರೂಪಕ್ಕೆ ತರುತ್ತೇವೆ ಎಂದರು.
ಚನ್ನಪಟ್ಟಣದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ : ಚನ್ನಪಟ್ಟಣದಲ್ಲಿರುವ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯಲ್ಲಿ ರಾಮನಗರ-ಚೆನ್ನಪಟ್ಟಣ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
75 ಕೋಟಿ ರೂ.ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಹಲವು ವರ್ಷಗಳಿಂದ ರೇಷ್ಮೆ ಮಾರುಕಟ್ಟೆ ಚಿಕ್ಕ ಜಾಗದಲ್ಲಿದೆ. ಅಲ್ಲದೆ ಮಾರುಕಟ್ಟೆ ಹಳೆಯದಾಗಿದೆ. ಇದನ್ನು ರಾಮನಗರದಿಂದ ಚನ್ನಪಟ್ಟಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಚನ್ನಪಟ್ಟಣದಲ್ಲಿ ಜಾಗ ಇರೋದ್ರಿಂದ ಮಾಡಲಾಗುತ್ತಿದೆ. 50 ವರ್ಷ ದೂರದೃಷ್ಟಿ ಇಟ್ಟುಕೊಂಡು ಇದನ್ನು ಮಾಡಲಾಗುತ್ತಿದೆ ಎಂದರು.
ಮಾವು ಸಂಸ್ಕರಣಾ ಘಟಕ: ಬೈರಾಪಟ್ಟಣದಲ್ಲಿ ಗುರುತಿಸಲಾಗಿರುವ ಒಟ್ಟು 40 ಎಕರೆ ಪ್ರದೇಶವಿದೆ. ಮೊದಲ ಹಂತದಲ್ಲಿ 15 ಎಕರೆಯ 4 ಎಕರೆ ಪ್ರದೇಶದಲ್ಲಿ ಸಾಮಾನ್ಯ ಸೌಲಭ್ಯಗಳನ್ನು ಕಲ್ಪಿಸಿ ಉಳಿದ ಜಾಗದಲ್ಲಿ ಆಹಾರ ಸಂಸ್ಕರಣಾ ಕ್ಲಸ್ಟರ್ ಮಾಡಲಾಗುವುದು.
ಇದರಲ್ಲಿಯೇ ಮಾವು ಸಂಸ್ಕರಣಾ ಘಟಕ ಕೂಡ ಬರುತ್ತದೆ. ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಐದು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಇದನ್ನೂ ಓದಿ : 'ಚುನಾಯಿತ ಸರ್ಕಾರಗಳ ವಿರುದ್ಧ ಗೂಢಚಾರಿಕೆ ದೇಶದ್ರೋಹದ ಕೃತ್ಯ