ರಾಮನಗರ: ಕಾಂಗ್ರೆಸ್ ಪಕ್ಷ ಈಗ ಮುಳುಗುತ್ತಿರುವ ಹಡಗು. ಅದು ಈಗ ಯಾರಿಗೂ ಬೇಡವಾದ ಪಕ್ಷ. ಅದು ಪ್ರಗತಿಪರ, ಚಿಂತನಪರ ಆಡಳಿತ ಕೊಟ್ಟಿಲ್ಲ. ಕಾಂಗ್ರೆಸ್ ಕೇವಲ ಸಮಾಜ ಒಡೆಯುವ ಮತ್ತು ಇಬ್ಭಾಗ ಮಾಡುವ ಕೆಲಸ ಮಾಡಿದೆ. ಧರ್ಮ ಒಡೆಯೋದು, ಜಾತಿ ಒಡೆಯೋದು. ಕಾಂಗ್ರೆಸ್ ಕೇವಲ ಒಬ್ಬರ ಮೇಲೊಬ್ಬರನ್ನು ಎತ್ತಿಕ್ಕುವ ಕೆಲಸ ಮಾಡಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಚನ್ನಪಟ್ಟಣದ ನೀರಾವರಿ ಯೋಜನೆಗಳು ಜಾರಿಯಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಎಲ್ಲ ಯೋಜನೆಗಳು ಪೂರ್ಣಗೊಳ್ಳಲಿವೆ. ಅಲ್ಲದೇ ಸಿ.ಪಿ.ಯೋಗೇಶ್ವರ್ ನಮ್ಮ ಪಕ್ಷದ ನಾಯಕರು. ಹಾಗಾಗಿ ಅವರಿಗೆ ಪಕ್ಷ ಯಾವತ್ತೂ ನಿರ್ಲಕ್ಷ್ಯ ಮಾಡಲ್ಲ. ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರುವ ವಿಚಾರ ಇಲ್ಲವೇ ಇಲ್ಲ. ಅವರು ಬಿಜೆಪಿ ಪಕ್ಷದ ಸದೃಢ ನಾಯಕರು. ಯಾವುದೇ ಕಾರಣಕ್ಕೂ ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ, ಅದನ್ನ ನಾವು ಕನಸಿನಲ್ಲೂ ಯೋಚಿಸಲು ಆಗಲ್ಲ. ಯೋಗೇಶ್ವರ್ ನಮ್ಮ ಜೊತೆಯಲ್ಲೇ ಇರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಬಿಜೆಪಿ ಪಕ್ಷ ನಿರ್ಲಕ್ಷ್ಯ ಮಾಡಿರುವ ವಿಚಾರದಲ್ಲಿ ಬಿಜೆಪಿ ಪಕ್ಷ ಅವರನ್ನ ನಿರ್ಲಕ್ಷ್ಯ ಮಾಡುವುದಿಲ್ಲ. ಅವರು ನಮ್ಮ ಪಕ್ಷದ ನಾಯಕರು. ಮುಂದಿನ ದಿನಗಳಲ್ಲಿ ಅವರಿಗೆ ಎಲ್ಲವೂ ಒಳ್ಳೆಯದಾಗಲಿದೆ. ಪಕ್ಷದಲ್ಲಿ ಉನ್ನತ ಸ್ಥಾನಮಾನ ಸಿಗಲಿದೆ. ಯಾರೂ ಕೂಡ ಈ ಬಗ್ಗೆ ಅನುಮಾನ ಪಡುವುದು ಬೇಡ ಎಂದರು.