ರಾಮನಗರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ರಾಮನಗರ ಬಂದ್ಗೆ ಕರೆ ನೀಡಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಖಾಕಿ ಸರ್ಪಗಾವಲು ಜೋರಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿರುವ ಜಿಲ್ಲಾಡಳಿತ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಭದ್ರತೆಯ ಹಿನ್ನೆಲೆಯಲ್ಲಿ 3 ಮಂದಿ ಐಪಿಎಸ್, ಒಬ್ಬರು ಎಸ್ಪಿ, 10 ಡಿವೈಎಸ್ಪಿ, 30 ಮಂದಿ ಇನ್ಸ್ಪೆಕ್ಟರ್ ಸೇರಿದಂತೆ ಒಂದು ಸಾವಿರ ಪೊಲೀಸರ ಕಣ್ಗಾವಲಿನಲ್ಲಿ ಬಂದ್ ನಡೆಯುತ್ತಿದೆ. ಬಂದ್ ಹಿನ್ನೆಲೆಯಲ್ಲಿ ಯಾವುದೇ ಪೆಟ್ರೋಲ್ ಬಂಕ್ಗಳಲ್ಲಿಯೂ ಪೆಟ್ರೋಲ್ ಹಾಕುತ್ತಿಲ್ಲ. ಕೆಲವೆಡೆ ಮಾತಿನ ಚಮಮಕಿ ನಡೆದಿದೆ.
ಮುಂಜಾನೆಯಿಂದಲೇ ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದು, ಬಸ್ಗಳು ರಸ್ತೆಗಿಳಿದಿಲ್ಲ. ಬೆಂಗಳೂರು-ಮೈಸೂರು ಮಾರ್ಗದಲ್ಲಿ ಕೆಲವೇ ಕೆಲವು ಬಸ್ಗಳು ಸಂಚಾರ ನಡೆಸುತ್ತಿದ್ದು, ಕೆಲಸಕ್ಕೆ ಹೋಗುವ ಮಂದಿ ಪರದಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ. ಅಪರೂಪಕ್ಕೆ ಕೆಎಸ್ಆರ್ಡಿಸಿ ಬಸ್ಗಳು ನಿಲ್ದಾಣದೊಳಗೆ ಪ್ರವೇಶಿಸಿದರೂ ಪ್ರಯಾಣಿಕರಿಗೆ ನಿಲುಗಡೆ ನೀಡುತ್ತಿಲ್ಲ. ಹೀಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.