ರಾಮನಗರ : ಈ ಬಾರಿ ವಿಧಾನಸಭಾ ಚುನವಾಣೆಯಲ್ಲಿ ನನ್ನನ್ನು ಸೋಲಿಸಲು ಕಾಂಗ್ರೆಸ್‌ನವರು ಮತದಾನದ ಮಧ್ಯರಾತ್ರಿ 3 ಸಾವಿರ ರೂ. ಕೂಪನ್ ಕಾರ್ಡ್ ಕೊಟ್ಟು ಆರ್ಥಿಕವಾಗಿ ಹಿಂದುಳಿದವರ ಮತ ಪಡೆದು ಅವರನ್ನು ದಾರಿ ತಪ್ಪಿಸಿದ್ದಾರೆ. ಆ ಮೂಲಕ ನನ್ನನ್ನ ಸೋಲಿಸಿದ್ದಾರೆ ಎಂದು ರಾಮನಗರ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಈ ಹಿಂದೆಯೂ ಬಹಳಷ್ಟು ಸಲ ಮಾಧ್ಯಮಗಳ ಮುಂದೆ ಹೇಳಿದ್ದೇನೆ. ಮಂಡ್ಯ ಲೋಕಸಭಾ ಚುನವಣೆ ಸಂದರ್ಭದಲ್ಲಿಯೂ ವಿರೋಧ ಪಕ್ಷಗಳು ನನ್ನನ್ನು ಕುತಂತ್ರದ ಮೂಲಕ ಸೋಲಿಸಿದರು. ಇಂದು ಕೂಡ ರಾಮನಗರದಲ್ಲಿ ಕೂಡ ಕುತಂತ್ರದ ರಾಜಕೀಯ ಮೂಲಕ ಸೋಲಿಸಿದ್ದಾರೆ. ಈ ವಿಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಜನರಿಗೆ ಅರಿವಾಗುತ್ತದೆ ಎಂದು ಹೇಳಿದರು.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು 2004ರಲ್ಲಿ ನಿಮ್ಮನ್ನ ನಂಬಿ ರಾಮನಗರದಿಂದ ಸ್ಪರ್ಧೆ ಮಾಡಿದರು. ನೀವು ಅಂದು ಅವರ ಕೈ ಹಿಡಿದಿದ್ದಿರಿ. ಹಾಗಾಗಿಯೇ ಪಕ್ಷ ಅಧಿಕಾರಕ್ಕೆ ತರಲು ಪಂಚರತ್ನ ಯಾತ್ರೆ ಮಾಡಿದರು. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನ ಅವರನ್ನು ಗೆಲ್ಲಿಸಿದರು. ಯುವಕರು, ರೈತರು ಎಲ್ಲರೂ ಕುಮಾರಣ್ಣನ ಕೈ ಹಿಡಿದಿದ್ದಾರೆ. ಕುಮಾರಣ್ಣನ ಮೇಲೆ ಜನರ ಪ್ರೀತಿ ಕಂಡು ನಾನೇ ಬೆರಗಾದೆ. ಇಡೀ ರಾಮನಗರ ಜಿಲ್ಲೆಯಲ್ಲಿ ಅತಿಹೆಚ್ಚು ನಿಷ್ಠಾವಂತ ಕಾರ್ಯಕರ್ತರು ಇರುವುದು ಚನ್ನಪಟ್ಟಣದಲ್ಲೇ ಎಂದು ಹೇಳಿದರು.
2004 ರಿಂದ ಕುಮಾರಸ್ವಾಮಿ ಅವರು ಇಂದಿನವರೆಗೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೆ, ಈ ಬಾರಿ ಜನರು ಬೇರೆ ರೀತಿ ತೀರ್ಮಾನ ತೆಗೆದುಕೊಂಡಿದ್ದಾರೆ. ಮಂಡ್ಯದ ರೀತಿಯೇ ಇಲ್ಲಿಯೂ ನಾನು ಸೋತಿರಬಹುದು, ಆದರೆ ರಾಮನಗರದ ಜನ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಅದು ವರ್ಣಿಸಲು ಸಾಧ್ಯವಿಲ್ಲ. ಎಂದಿಗೂ ನಾನು ಚಿರಋಣಿ ಯಾಗಿದ್ದೇನೆ. ನಿಮ್ಮ ಜೊತೆಯಲ್ಲಿ ನಾನು ನನ್ನ ಕುಟುಂಬ ಇರುತ್ತದೆ. ಸೋತ ಮಾತ್ರಕ್ಕೆ ಮನೆಯಲ್ಲಿ ಕೂರುವುದಿಲ್ಲ. ನಿಮ್ಮ ಜತೆ ಇರುತ್ತೇನೆ. ಸೋಲು - ಗೆಲುವು ನಮ್ಮ ಕುಟುಂಬಕ್ಕೆ ಹೊಸತಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಇನ್ನು ನಿಖಿಲ್ ರಾಮನಗರ ತೊರೆಯುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಅವರು, ನಾನು ಯಾವುದೇ ಕಾರಣಕ್ಕೂ ರಾಮನಗರ ಬಿಟ್ಟು ಹೋಗುವುದಿಲ್ಲ. ಜನರನ್ನ ಕೈ ಬಿಡುವ ಪ್ರಶ್ನೆ ಇಲ್ಲ. ಅಧಿಕಾರ ಇಲ್ಲದಿದ್ದರೂ ಜನಸೇವೆ ಮಾಡುತ್ತೇವೆ. ಮುಂದಿನ ರಾಜಕೀಯದ ಬಗ್ಗೆ ಸದ್ಯ ಯಾವುದೇ ಚಿಂತನೆ ನಡೆಸಲ್ಲ. ಚುನಾವಣಾ ರಾಜಕೀಯದ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ದೇವೇಗೌಡರು ಕಟ್ಟಿರುವ ಪಕ್ಷವನ್ನ ಬಲಿಷ್ಠಗೊಳಿಸುವ ಚಿಂತನೆ ನಡೆಸುತ್ತಿದ್ದೇನೆ.
ಮುಂದಿನ ಲೋಕಸಭೆ ಆಗಲಿ, 2028ರ ವಿಧಾನಸಭಾ ಚುನಾವಣೆ ಬಗ್ಗೆ ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ನಾನು ಬೇರೆ ಜಿಲ್ಲೆಗೆ ಹೋಗುವ ಪ್ರಶ್ನೆ ಇಲ್ಲ. 2028ಕ್ಕೆ ರಾಮನಗರದಲ್ಲಿ ನನಗಿಂತ ಪ್ರಬಲ ಅಭ್ಯರ್ಥಿ ಬಂದರೇ ಕಾರ್ಯಕರ್ತರಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಚರ್ಚಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ : ಬಿಜೆಪಿ ಸರ್ಕಾರದಲ್ಲಾದ ಲೂಟಿ ಈ ಸರ್ಕಾರದಲ್ಲೂ ನಡೆಯಲಿದೆ: ಹೆಚ್ ಡಿ ಕುಮಾರಸ್ವಾಮಿ