ರಾಮನಗರ: ರಾಮನಗರ ಐತಿಹಾಸಿಕ ಚಾಮುಂಡಿ ಕರಗ ಉತ್ಸವದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಟಾಕ್ ವಾರ್ ಮುಂದುವರೆದಿದೆ. ನಿನ್ನೆಯಷ್ಟೇ ಹೆಚ್ ಡಿ ಕೋಟೆಯಲ್ಲಿ ಒಂದೇ ವೇದಿಕೆ ಹಂಚಿಕೊಂಡು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ದ ನಾಯಕರು ಇಂದು ಪರಸ್ಪರ ವಾಗ್ಯುದ್ಧ ನಡೆಸುತ್ತಿದ್ದಾರೆ. ಕ್ಷೇತ್ರದ ಜನತೆ ಸಮುದಾಯದ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಿದ್ದೀರಿ. ನನಗೂ ಕೂಡ ಒಮ್ಮೆ ಅವಕಾಶ ನೀಡಿ ಎನ್ನುವ ಮೂಲಕ ಪರೋಕ್ಷವಾಗಿ ಸಿಎಂ ಗದ್ದುಗೆ ಮೇಲಿನ ಆಸೆಯನ್ನ ಡಿಕೆಶಿ ಬಿಚ್ಚಿಟ್ಟಿದ್ದಾರೆ.
ಹೆಚ್ಡಿಕೆಗೆ ಟಾಂಗ್ ಕೊಟ್ಟ ಡಿಕೆಶಿ: ರಾಮನಗರದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ನೇರ ಸವಾಲು ಹಾಕಿದ್ದಾರೆ. ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಪಾಲ್ಗೊಂಡ ಅವರು, ನಮ್ಮ ಸಮುದಾಯಕ್ಕೆ ಸೇರಿದ ಕುಮಾರಸ್ವಾಮಿಗೂ ಅವಕಾಶ ನೀಡಿದ್ದೀರಿ. ದೇವೇಗೌಡರಿಗೂ ಅವಕಾಶ ನೀಡಿದ್ದೀರಿ. ನೀವು ಈಗ ನನಗೂ ಅವಕಾಶ ಕೊಡಿ. ನನಗೆ ಯಾವ ಹೂವಿನ ಹಾರ ಬೇಡ. ನಾನು ಇಲ್ಲಿ ಅಭ್ಯರ್ಥಿ ನಿಲ್ಲಿಸುತ್ತೇನೆ. ಅವರನ್ನ ವಿಧಾನಸೌಧಕ್ಕೆ ಕಳುಹಿಸಿಕೊಡಿ, ಅದೇ ನನಗೆ ಹೂವಿನಹಾರ ಎಂದು ಕಾಂಗ್ರೆಸ್ ಪಕ್ಷದಿಂದ ರಾಮನಗರದ ಶ್ರೀರಾಮ ಥಿಯೇಟರ್ ಬಳಿಯ ವೇದಿಕೆಯಲ್ಲಿ ಡಿಕೆಶಿ ಪವರ್ ಫುಲ್ ಭಾಷಣ ಮಾಡುವ ಮೂಲಕ ದಳಪತಿಗಳಿಗೆ ನೇರ ಸವಾಲು ಹಾಕಿದರು.
ಡಿಕೆಶಿಗೆ ಟಾಂಗ್ ಕೊಟ್ಟ ಹೆಚ್ಡಿಕೆ: ಮತ್ತೊಂದೆಡೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ನೇರಾನೇರ ಟಾಂಗ್ ಕೊಟ್ಟಿದ್ದಾರೆ. ರಾಮನಗರ ಹಾಗೂ ಡಿಕೆಶಿಯವರಿಗೂ ಏನು ಸಂಬಂಧ ಇದೆ. ರಾಜ್ಯಕ್ಕೆ ಅವರ ಕೊಡುಗೆ ಏನು?. ನಿನ್ನೆ ಅವರು ಹೇಳಿರುವ ಹೇಳಿಕೆಯಿಂದ ವಿಚಲಿತರಾಗುವ ಪ್ರಶ್ನೆಯೇ ಇಲ್ಲ. ರಾಮನಗರ ಹಾಗೂ ನನ್ನ ಸಂಬಂಧ ತಾಯಿ-ಮಗನ ಸಂಬಂಧ. ಇಂತಹ 100 ಜನ ಡಿಕೆಶಿ ಬಂದ್ರೂ ನಮಗೇನು ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಕಳೆದ 25 ವರ್ಷ ಕಾಂಗ್ರೆಸ್ ಪಾರ್ಟಿ ಅಧಿಕಾರದಲ್ಲಿತ್ತು. ಆಗ ಒಕ್ಕಲಿಗರ ಸಮಾಜಕ್ಕೆ ಇವರ ಕೊಡುಗೆ ಏನಿದೆ ಅಂತಾ ಹೇಳಬೇಕು ಅಲ್ವಾ...! ಇವರ ಹಿನ್ನೆಲೆ ಏನು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಲೂಟಿ ಹೊಡೆದು ಹಣ ಸಂಪಾದನೆ ಮಾಡಿದ್ದಾರೆ. ನಮ್ಮ ಕುಟುಂಬಕ್ಕೂ ಅವರ ಕುಟುಂಬಕ್ಕೂ ಹೋಲಿಕೆಯೇ ಇಲ್ಲ. ನಮ್ಮ ಕುಟುಂಬದಿಂದ ರಾಜ್ಯಕ್ಕೆ ಕೊಡುಗೆ ಸಾಕಷ್ಟು ಇದೆ ಎಂದು ನೇರವಾಗಿ ಕಿಡಿಕಾರಿದರು.
ಡಿಕೆಶಿ ಸಿಎಂ ಆಗಿ ಏನು ಸಾಧನೆ ಮಾಡಲಿದ್ದಾರೆಂದು ಜನತೆ ಮುಂದೆ ಇಡಬೇಕು ಅಲ್ವಾ...! ಮತದಾರರ ಕಣ್ಣಿನ ಜೊತೆಗೆ ದೇವರ ಕಣ್ಣು ಕೂಡ ಬೇಕಾಗಿದೆ. ಬಡವರಿಗೆ ನೊಂದ ಜನರಿಗೆ ಏನು ನೀಡಿದ್ದೀರಿ? ಎಂಬುದನ್ನ ಹೇಳಬೇಕು. ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ. ಆದ್ರೆ, ಬಡವರಿಗೆ ಕಷ್ಟದಲ್ಲಿರುವವರಿಗೆ ಎಂದಾದರೂ ಸಹಾಯ ಮಾಡಿದ್ದೀರಾ?. ಇದಲ್ಲದೆ ಡಿಕೆಶಿ ಜೈಲಿಗೆ ಹೋಗಿರುವುದು ನಮ್ಮ ಸಮಾಜಕ್ಕೆ ಕಳಂಕ ಅಲ್ವ. ಇಂತ ಕಳಂಕಿತರನ್ನ ನಮ್ಮ ಸಮಾಜ ಎಂದಿಗೂ ಕೂಡ ಒಪ್ಪುವುದಿಲ್ಲ ಎಂದರು.
ಕಾಂಗ್ರೆಸ್ ಸ್ವತಂತ್ರವಾಗಿ 120 ಸ್ಥಾನ ಬರಲು ಸಾಧ್ಯವೇ ಇಲ್ಲ. ಈ ಹಿಂದೆ ನಡೆದ ಚುನಾವಣೆಯಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರು ಬೇರೆ ಪಕ್ಷ ಮಾಡಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಯಾವುದೇ ಕಾರಣಕ್ಕೂ ಕಾಂಗ್ರೆಸ್ 2023 ಕ್ಕೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.
ಇದನ್ನೂ ಓದಿ: ಯಾವುದೇ ಸರ್ಕಾರಿ ಶಾಲೆ ಮುಚ್ಚಲ್ಲ, ಅಗತ್ಯ ಬಿದ್ದರೆ ಎರಡು ಮೂರು ಶಾಲೆ ಸಂಯೋಜನೆ: ಸಚಿವ ನಾಗೇಶ್