ರಾಮನಗರ : ಸಂಬಳ ಕೊಡದ ಹಿನ್ನಲೆ ಇಬ್ಬರು ಪೌರ ಕಾರ್ಮಿಕರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿರುವ ಘಟನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ಇಂದು ನಡೆದಿದೆ. ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಪಂಚಾಯತ್ ಕಚೇರಿಯ ಮುಂಭಾಗ ಇಬ್ಬರು ಪೌರ ಕಾರ್ಮಿಕರು ಸಂಬಳ ನೀಡುವಂತೆ ಒತ್ತಾಯಿಸಿ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದರು.
ಕಲ್ಲಹಳ್ಳಿ ಪಂಚಾಯಿತಿಯು ಕೆಲವು ತಿಂಗಳುಗಳ ಸಂಬಳ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಇಬ್ಬರು ಪೌರ ಕಾರ್ಮಿಕರು ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇದರಿಂದ ಎಚ್ಚೆತ್ತ ಪಂಚಾಯತ್ ಆಡಳಿತ ಬಾಕಿ ಸಂಬಳ 3.20 ಲಕ್ಷ ರೂಪಾಯಿಯನ್ನು ಪಾವತಿ ಮಾಡಿದೆ. ಬಳಿಕ ಇಬ್ಬರು ಪೌರಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಈ ಇಬ್ಬರು ಕಲ್ಲಹಳ್ಳಿ ಗ್ರಾಮ ಪಂಚಾಯತ್ನಲ್ಲಿ ಕಳೆದ ಒಂದು ವರ್ಷದಿಂದ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇವರಿಗೆ ಕಳೆದ ಕೆಲವು ತಿಂಗಳುಗಳಿಂದ ವೇತನವನ್ನು ನೀಡಿಲ್ಲ. ಇಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೇತನ ನೀಡಲು ಸತಾಯಿಸುತ್ತಿದ್ದಾರೆ. ಇದರಿಂದಾಗಿ ಜೀವನ ನಿರ್ವಹಣೆಗೂ ತೊಂದರೆಯಾಗಿದೆ. ಈ ಸಂಬಂಧ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಂಬಳ ನೀಡಿಲ್ಲ ಎಂದು ಪೌರಕಾರ್ಮಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ : ಸಂಬಳ ಸಿಗದ ಆಕ್ರೋಶ; ತುಮಕೂರು ನಗರದ 4 ಇಂದಿರಾ ಕ್ಯಾಂಟಿನ್ ಸೇವೆ ಸ್ಥಗಿತ