ರಾಮನಗರ : ಈ ಬಾರಿ ಕನಕಪುರದಲ್ಲಿ ಬಿಜೆಪಿಯ ಕಮಲ ಅರಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕನಕಪುರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಪರ ಪ್ರಚಾರ ನಡೆಸಿ ಬಳಿಕ ಮಾತನಾಡಿದ ಅವರು, ಇದು ಕನ್ನಡ ನಾಡಿನ ಭವಿಷ್ಯ ನಿರ್ಧರಿಸುವ ಚುನಾವಣೆ. ಬಿಜೆಪಿ ಕಾರ್ಯಕರ್ತರ ಪಕ್ಷ. ಅಶ್ವತ್ಥ್ ನಾರಾಯಣ್ ಅವರು ಈ ಭಾಗದಲ್ಲಿ ಸಾಕಷ್ಟು ಸಂಘಟನೆ ಮಾಡಿದ್ದಾರೆ. ಇಲ್ಲಿ ಶಕ್ತಿ ಬರಬೇಕಾದರೆ ಸಾಮ್ರಾಟ್ ಅಶೋಕ್ ಅವರೇ ಗೆದ್ದು ಬರಬೇಕು ಎಂದು ಹೇಳಿದರು.
ಅಶೋಕ್ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಕ್ರಾಂತಿ ಮಾಡಿದ್ದೇವೆ. ಅಶೋಕ್ ಅವರು ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗ್ರಾಮಗಳಲ್ಲಿನ ಜನರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಇಂತಹ ವ್ಯಕ್ತಿ ಇಲ್ಲಿ ಶಾಸಕರಾಗಬೇಕೊ? ಬೇಡ್ವೊ?. ನಾನು ಸಿಎಂ ಆದ ತಕ್ಷಣ ವಿದ್ಯಾನಿಧಿ ಯೋಜನೆ ಕೊಟ್ಟಿದ್ದೇನೆ. ಇದರಿಂದ 11 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ ಎಂದರು.
ಕಾಂಗ್ರೆಸ್ ನವರು ಗ್ಯಾರೆಂಟಿ ಎಂದು ಹೇಳುತ್ತಾ ಬರುತ್ತಿದ್ದಾರೆ. ಯಾವುದು ಮಾರಾಟವಾಗುವುದಿಲ್ಲವೋ, ಅದಕ್ಕೆ ಗ್ಯಾರೆಂಟಿ ಕೊಡುತ್ತಾರೆ. ಈ ಕಾಂಗ್ರೆಸ್ಗೆ ಈಗ ಗ್ಯಾರೆಂಟಿ ಇಲ್ಲ. ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ನಾವು 2013ರಲ್ಲಿಯೇ ಅಕ್ಕಿಯನ್ನು ಕೊಟ್ಟಿದ್ದೆವು. ಅದನ್ನು ಕಡಿಮೆ ಮಾಡಿದವರು ಕಾಂಗ್ರೆಸ್ನವರು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಬೆಳಗಾವಿ ಗ್ರಾಮೀಣ ಪ್ರತ್ಯೇಕ ತಾಲೂಕು, ಮನೆ ಬಾಗಿಲಿಗೆ ಸರ್ಕಾರಿ ಸೇವೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ
ಕಾಂಗ್ರೆಸ್ ಪಕ್ಷ ಅಂದರೆ ಭ್ರಷ್ಟಾಚಾರ. ಅವರು ಭ್ರಷ್ಟಾಚಾರ ಮಾಡಿ ನಮ್ಮ ಕಡೆ ಬೆರಳು ತೋರುತ್ತಿದ್ದಾರೆ. ಆದರೆ ಮೂರು ಬೆರಳು ಅವರ ಕಡೆ ತೋರಿಸುತ್ತಿವೆ. ಕಾಂಗ್ರೆಸ್ ಸಮಾಜ ಒಡೆಯುವ ಪಕ್ಷ. ಸಮುದಾಯಗಳನ್ನು ಒಡೆದು ಲಾಭ ಪಡೆಯುವ ಕೆಲಸವನ್ನು ಕಾಂಗ್ರೆಸ್ನವರು ಮಾಡುತ್ತಿದ್ದಾರೆ. ಸಮಾಜ ಒಡೆಯುವವರು ಬೇಕೊ, ಸಮಾಜ ಒಗ್ಗೂಡಿಸುವ ಬಿಜೆಪಿ ಬೇಕೋ. ನೀವೇ ನಿರ್ಧರಿಸಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಡಬಲ್ ಎಂಜಿನ್ ಸರ್ಕಾರದ ಮೋದಿಯವರು ಕೋವಿಡ್ ಲಸಿಕೆ ಕೊಟ್ಟಿದ್ದರಿಂದ ನಾವೆಲ್ಲ ಕೋವಿಡ್ ಮುಕ್ತರಾಗಿದ್ದೇವೆ. ಕಾಂಗ್ರೆಸ್ ನವರು ಲಸಿಕೆ ವಿರುದ್ಧ ಅಪಪ್ರಚಾರ ಮಾಡಿದ್ದರು. ಅಲ್ಲದೆ ರಾಜ್ಯದಲ್ಲಿ ಪ್ರವಾಹ ಬಂದಾಗ ಡಬಲ್ ಬೆಳೆ ಪರಿಹಾರ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಸಮಾಜವನ್ನೂ ಒಗ್ಗೂಡಿಸುವುದು ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಕನಕಪುರದಲ್ಲಿ ಅಶೋಕ ಅವರ ಕೈ ಬಲ ಪಡಿಸಿ, ಅಶೋಕ ಅವರನ್ನು ಗೆಲ್ಲಿಸಿ. ಕನಕಪುರ ಕ್ಷೇತ್ರಕ್ಕೆ ಎಷ್ಟು ಅನುದಾನ ಬೇಕೋ, ಅಷ್ಟು ನಾನು ಕೊಡುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ರಾಷ್ಟ್ರ ಮತ್ತು ರಾಜ್ಯ ನಾಯಕರು ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ನಾಳೆ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದೆ. ಮೇ 10ಕ್ಕೆ ಚುನಾವಣೆ ನಡೆಯಲಿದ್ದು, ಮೇ. 13ಕ್ಕೆ ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ : ಪ್ರಚಂಡ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ : ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್