ರಾಮನಗರ : ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣಪ್ಪ ಎಂಬುವವರ ಪುತ್ರಿ ಹೇಮಲತಾ (19) ಆಕ್ಟೋಬರ್ 8 ರಂದು ಸಂಜೆ ಮನೆಯಿಂದ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಸಂಬಂಧಿಕರೊಬ್ಬರ ಸಾವಿಗೆ ಹೋಗಿ ಮರಳಿ ಬಂದು ನೋಡಿದಾಗ ಹೇಮಲತಾ ಮನೆಯಲ್ಲಿ ಇರಲಿಲ್ಲ. ಎಲ್ಲ ಕಡೆ ಹುಡುಕಾಟ ನಡೆಸಿದರೂ ಯುವತಿಯ ಸುಳಿವು ಸಿಕ್ಕಿರಲಿಲ್ಲ.
ಹೀಗಾಗಿ ನಿನ್ನೆ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದ್ರೆ ಇವತ್ತು ಬೆಳಗ್ಗೆ ಮನೆಯ ಸಮೀಪವೇ ಇರುವ ಯುವತಿಯ ದೊಡ್ಡಪ್ಪನ ಜಮೀನಿನಲ್ಲಿ ಹೇಮಲತಾ ಮೃತ ದೇಹ ಪತ್ತೆಯಾಗಿದೆ. ಬೆಳಗ್ಗೆ ಸ್ಥಳೀಯರು ನೋಡಿದಾಗ ಜಮೀನಿನಲ್ಲಿ ಯುವತಿಯ ಕೈ ಕಾಣಿಸಿದೆ. ಹೀಗಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತ ದೇಹವನ್ನ ಹೊರತೆಗೆದು ನೋಡಿದಾಗ, ಹೇಮಲತಾಳದ್ದೆ ದೇಹ ಎಂದು ಗೊತ್ತಾಗಿದೆ.
ಮರ್ಯಾದಾ ಹತ್ಯೆ ಶಂಕೆ : ಇನ್ನು ಯುವತಿಯ ನಾಪತ್ತೆ ಹಾಗೂ ಸಾವು ಸಾಕಷ್ಟು ಅನುಮಾನಗಳನ್ನ ಹುಟ್ಟುಹಾಕಿದೆ. ಮರ್ಯಾದಾ ಹತ್ಯೆಯಾಗಿರಬಹುದು ಎಂದು ಶಂಕಿಸಲಾಗುತ್ತಿದೆ. ಅಂದಹಾಗೆ ಹೇಮಲತಾ ಕಳೆದ ಮೂರು ವರ್ಷಗಳಿಂದ ಅನ್ಯಜಾತಿಯ ಯುವಕನೊಬ್ಬನನ್ನ ಪ್ರೀತಿಸುತ್ತಿದ್ದಳು ಎಂದು ಹೇಳಲಾಗುತ್ತಿದೆ.
ಜಮೀನಿನ ಸಮೀಪವೇ ಮೃತದೇಹ ಸಿಕ್ಕಿದ್ದು, ದೂರದಲ್ಲಿ ಯುವತಿಯ ಚಪ್ಪಲಿ ದೊರೆತಿವೆ. ಅಲ್ಲದೇ ಯುವತಿಯ ಒಳಉಡುಪುಗಳು ಬೇರೊಂದು ಸ್ಥಳದಲ್ಲಿ ಸಿಕ್ಕಿವೆ. ಆದ್ರೆ ಆಶ್ಚರ್ಯ ಅಂದ್ರೆ ಮಣ್ಣಿನಿಂದ ಮೃತದೇಹವನ್ನ ಹೊರತೆಗೆದಾಗ ಯುವತಿಯ ಒಳ ಉಡುಪುಗಳು ಇದ್ದದ್ದು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿವೆ.
ಇನ್ನು ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ರಾಮನಗರ ಉಪವಿಭಾಗಾಧಿಕಾರಿ ದಾಕ್ಷಾಯಿಣಿ ಸೇರಿದಂತೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.