ರಾಮನಗರ: ಜುಲೈ ತಿಂಗಳಿಂದ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳು (ಆಟೋ), ಟ್ರ್ಯಾಕ್ಟರ್‌ಗಳಂತಹ ಕೃಷಿ ವಾಹನಗಳು ಮತ್ತು ಸೈಕಲ್‌ಗಳ ಪ್ರವೇಶಕ್ಕೆ ಅನುಮತಿ ಇಲ್ಲ. ಮುಂದಿನ 10- 15 ದಿನಗಳಲ್ಲಿ ಈ ನಿಯಮ ಜಾರಿಯಾಗಲಿದೆ. ಈ ಸಂಬಂಧ ಅಧಿಕೃತ ಅಧಿಸೂಚನೆಗಾಗಿ ಕಾಯುತ್ತಿದ್ದೇವೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಕೇವಲ 90 ನಿಮಿಷಗಳಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತಲುಪಲು ಪ್ರಯಾಣಿಕರಿಗೆ ಸಹಾಯ ಮಾಡುವ 119 ಕಿ.ಮೀ ಉದ್ದದ ಹೈವೇಗೆ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಚಾಲನೆ ನೀಡಿದ್ದರು. ಅಂದಿನಿಂದ ಒಂದಲ್ಲೊಂದು ಕಾರಣಕ್ಕಾಗಿ ಹೈವೇ ಸುದ್ದಿಯಲ್ಲಿದೆ. ಕಳೆದ ಅಕ್ಟೋಬರ್‌ನಲ್ಲಿ ಸಂಚಾರಕ್ಕೆ ತೆರೆಯಲಾದ 6-10 ಲೇನ್ ಹೆದ್ದಾರಿಯಲ್ಲಿ ಈವರೆಗೆ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ದಶಪಥ ಹೆದ್ದಾರಿ ಸಂಚಾರಕ್ಕೆ ತೆರೆದಾಗಿನಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸಲು ಚರ್ಚೆಗಳು ನಡೆಯುತ್ತಿವೆ. ಏಕೆಂದರೆ ಅವು ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸಲು ಅನುಮತಿಸಲಾದ ವಾಹನಗಳಿಗೆ ಅಪಾಯ ಉಂಟುಮಾಡುತ್ತವೆ ಎಂದು ಹೇಳಲಾಗಿದೆ. ಈ ಹಿಂದೆ, ಸೂಪರ್ ಬೈಕ್‌ಗಳನ್ನು ಅನುಮತಿಸುವ ಯೋಜನೆ ಇತ್ತು. ಆದಾಗ್ಯೂ, ಹೆಚ್ಚಿನವರು ಲೇನ್ ಶಿಸ್ತನ್ನು ಅನುಸರಿಸುವುದಿಲ್ಲ ಮತ್ತು ನಿಷೇಧಿತ ಹೆಚ್ಚಿನ ವೇಗದಲ್ಲಿ ಪ್ರಯಾಣಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಅವುಗಳನ್ನು ಸಹ ನಿಷೇಧಿಸಲಾಗುತ್ತದೆ.
ದೆಹಲಿ-ಮೀರತ್ ಮತ್ತು ದೆಹಲಿ-ವಡೋದರಾ ಎಕ್ಸ್‌ಪ್ರೆಸ್‌ವೇಗಳ ಮಾರ್ಗದಲ್ಲಿ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸಲಾಗುವುದು. ಸೂಚನೆ ನೀಡಿದ ನಂತರ, ನಿಷೇಧವನ್ನು ತಕ್ಷಣವೇ ಜಾರಿಗೊಳಿಸಲಾಗುವುದು ಎಂದು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಅಪಘಾತ ಸಂಖ್ಯೆ ಹೆಚ್ಚಳ: ಹೊಸ ಹೆದ್ದಾರಿ ಪ್ರಾರಂಭವಾಗುತ್ತಿದ್ದಂತೆ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಅತಿವೇಗವಾಗಿ ಬಂದ ಸವಾರರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹೊಸ ಹೆದ್ದಾರಿ ಬಹುತೇಕ ಪ್ರಾರಂಭಗೊಂಡಿದ್ದು, 140 ರಿಂದ 150 ಕಿ.ಮಿ. ವೇಗದಲ್ಲಿ ಕಾರಿನ ಚಾಲಕರು ವಾಹನ ಚಾಲನೆ ಮಾಡುತ್ತಾರೆ. ಹಿಂದೆ ಇದ್ದ ಬೆಂಗಳೂರು ಮೈಸೂರು ನಾಲ್ಕು ತಾಸು ಪ್ರಯಾಣವು ಈ ಹೆದ್ದಾರಿಯಿಂದ ಕೇವಲ ಒಂದೂವರೆ ತಾಸಿಗೆ ಇಳಿದಿದೆ. ವೇಗವಾಗಿ ಬರುವ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಖ್ಯೆ ಕೂಡ ಹೆಚ್ಚಳವಾಗಿದೆ.
ಅಪಘಾತಕ್ಕೆ ಗುರುತಿಸಿರುವ ನ್ಯೂನತೆಗಳು..: ಇದುವರೆಗೆ ಅಪಘಾತಗಳು ನಡೆದಿರುವ ಸ್ಥಳಗಳಿಗೆ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಭೇಟಿ ನೀಡಿದ್ದು ಕೆಲವೊಂದು ನ್ಯೂನತೆಗಳನ್ನು ಗುರುತಿಸಿದ್ದಾರೆ. ಅವೈಜ್ಞಾನಿಕವಾಗಿ ಸೂಚನಾ ಫಲಕ, ಬ್ಲಿಂಕರ್ ಅಳವಡಿಕೆ, ಹಾಕಿದ ಸಿಗ್ನಲ್ ಚಿಹ್ನೆ ವಾಹನ ಸವಾರರಿಗೆ ಗೋಚರಿಸುತ್ತಿಲ್ಲ. ಬಿಡದಿ, ರಾಮನಗರದ ತಾತ್ಕಾಲಿಕ ಎಂಟ್ರಿ ಎಕ್ಸಿಟ್ಗಳಿಗೆ ಸೂಚನ ಫಲಕಗಳು ಇಲ್ಲ. ರಸ್ತೆಯಲ್ಲಿ ಆಗಾಗ ಶೇಖರವಾಗಿರುವ ಮರಳು, ಮಣ್ಣು ಸ್ವಚ್ಛ ಮಾಡಲಾಗುತ್ತಿಲ್ಲ. ಜಯಪುರ ಗೇಟ್ ಸೇರಿದಂತೆ ಹಲವೆಡೆ ರಸ್ತೆ ಸಮತಟ್ಟಾಗಿ ನಿರ್ಮಿಸಿಲ್ಲ. ಜಯಪುರ ಬ್ರಿಡ್ಜ್ ಬಳಿ ಏಕಾಏಕಿ ಎತ್ತರಗೊಳ್ಳುವ ರಸ್ತೆ 300 ಮೀಟರ್ ನಂತರ ಏಕಾಏಕಿ ತಗ್ಗಿನಿಂದ ಕೂಡಿದೆ. ಇಳಿಜಾರು ಇರುವ ಕಡೆ ರಸ್ತೆ ಉಬ್ಬುಗಳನ್ನು ಜಂಪ್ ಆಗದಂತೆ ಲೆವಲ್ ಆಗಿ ನಿರ್ಮಿಸಿಲ್ಲ. ಈ ರಸ್ತೆಯುದ್ದಕ್ಕೂ ಭರವಸೆಯಂತೆ ಅಲ್ಲಲ್ಲಿ ಕ್ಯಾಮರಾ ಅಳವಡಿಸಿಲ್ಲ ಎಂದು ತಿಳಿಸಿದ್ದಾರೆ.