ರಾಮನಗರ: ರಾಮನಗರ ಜಿಲ್ಲಾ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಆಪ್ತ ಹೆಚ್. ಬಸಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ನಿಗದಿಯಾಗಿದ್ದ ಜಿ.ಪಂ. ಚುನಾವಣೆಯಲ್ಲಿ ಹೆಚ್.ಬಸಪ್ಪ ಹೊರತುಪಡಿಸಿ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಬಸಪ್ಪ ಅವರನ್ನ ನೂತನ ಅಧ್ಯಕ್ಷರಾಗಿ ಘೋಷಣೆ ಮಾಡಿದರು.
ರಾಮನಗರ ಜಿಲ್ಲಾ ಪಂಚಾಯ್ತಿಯಲ್ಲಿ 22 ಸದಸ್ಯ ಬಲವಿದೆ. ಅದರಲ್ಲಿ 16 ಕಾಂಗ್ರೆಸ್, 6 ಜೆಡಿಎಸ್ ಸದಸ್ಯರಿದ್ದಾರೆ. ಜಿಲ್ಲೆಯ ಪ್ರಭಾವಿ ನಾಯಕರಾದ ಡಿಕೆ ಬ್ರದರ್ಸ್ ಅನುಪಸ್ಥಿತಿಯಲ್ಲಿ ಇಂದು ಜಿ.ಪಂ ಚುನಾವಣೆ ನಡೆಯಿತು. ಪ್ರತಿ ಚುನಾವಣೆಯಲ್ಲಿ ಅಧ್ಯಕ್ಷ ಗಾದಿ ಅಭ್ಯರ್ಥಿ ಆಯ್ಕೆಯನ್ನ ಡಿಕೆ ಬ್ರದರ್ಸ್ ಮಾಡುತ್ತಿದ್ದರು. ಆದ್ರೆ, ಈ ಬಾರಿ ಅಧ್ಯಕ್ಷ ಗಾದಿಯ ಅಭ್ಯರ್ಥಿಯನ್ನ ಸ್ಥಳೀಯ ಕೈ-ತೆನೆ ಮುಖಂಡರೇ ಆಯ್ಕೆ ಮಾಡಿದ್ದಾರೆ.
ಸ್ಥಳೀಯ ನಾಯಕರ ಅಣತಿಯಂತೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸರ್ವಾನುಮತದಿಂದ ಬಸಪ್ಪ ಅವರನ್ನು ಆಯ್ಕೆ ಮಾಡಿದ್ದಾರೆ. ಈ ವೇಳೆ, ಮಾತನಾಡಿದ ನೂತನ ಅಧ್ಯಕ್ಷ ಬಸಪ್ಪ ನನಗೆ ಇವತ್ತು ಅಧ್ಯಕ್ಷ ಸ್ಥಾನ ಸಿಕ್ಕಿದೆ. ಆದರೆ, ನನಗೆ ಈ ಬಗ್ಗೆ ಸಂತಸ ಸಮಾಧಾನ ಇಲ್ಲ, ನಮ್ಮ ಇಬ್ಬರು ನಾಯಕರಾದ ಡಿ.ಕೆ ಶಿವಕುಮಾರ್, ಡಿ.ಕೆ.ಸುರೇಶ್ ರವರು ಕಷ್ಟದಲ್ಲಿದ್ದಾರೆ, ಹಾಗಾಗಿ ಇವತ್ತಿನ ದಿನ ನನಗೆ ಅಷ್ಟು ಸಂತೋಷವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇವತ್ತು ನನಗೆ ಈ ಸ್ಥಾನಮಾನ ಸಿಕ್ಕಿರುವುದಕ್ಕೆ ಡಿ.ಕೆ.ಸಹೋದರರು, ಜಿಲ್ಲಾ ಪಂಚಾಯತ್ ಸದಸ್ಯರು ಕಾರಣ ಹಾಗಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.