ರಾಮನಗರ : ಚನ್ನಪಟ್ಟಣ ನಗರದ ಮುನಿಯಪ್ಪನದೊಡ್ಡಿ ಬಳಿಯ ಬೀಡಿ ಕಾಲೋನಿ, ಸಾತನೂರು ರಸ್ತೆಯ ಇಂದಿರಾ ಕಾಟೇಜ್ನಲ್ಲಿ ಅಕ್ರಮ ಗೋಸಾಗಣೆ, ಗೋಮಾಂಸ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗೌಗ್ಯಾನ್ ಹೆಸರಿನ ಎನ್ಜಿಒ ಸದಸ್ಯರು ಸ್ಥಳೀಯ ಪೊಲೀಸರೊಂದಿಗೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಎದುರೇ ವೈದ್ಯ ಸೇರಿದಂತೆ ಎನ್ಜಿಒ ಸದಸ್ಯರಿಗೆ ಕೆಲ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದೆಹಲಿ ಮೂಲದ ಗೌಗ್ಯಾನ್ ಹೆಸರಿನ ಎನ್ಜಿಒ ತಂಡದವರು ಪೊಲೀಸ್ ವೃತ್ತ ನಿರೀಕ್ಷಕರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೂರ್ವ ಪೊಲೀಸ್ ಠಾಣೆ ಮತ್ತು ಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಕೆಲ ಸಿಬ್ಬಂದಿ ಮತ್ತು ಪಶು ವೈದ್ಯರ ಜೊತೆಯಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮ ಗೋ ರಫ್ತು ಮಾರಾಟಗಾರರು ಮತ್ತು ಸ್ಥಳೀಯರು ಒಗ್ಗೂಡಿ ಸದಸ್ಯರು ಮತ್ತು ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಪಶು ವೈದ್ಯ ಗಿರೀಶ್ ಅವರು ಮಾಂಸ ಪರೀಕ್ಷೆಗೆ ಬಂದಂತಹ ಸಂದರ್ಭದಲ್ಲಿ ಮಾಂಸದಂಗಡಿಯ ಮಾಲೀಕರು ಅವರ ಮೇಲೆ ಸಹ ಹಲ್ಲೆ ಮಾಡಿದ್ದಾರೆ. ಸಂಸ್ಥೆಯವರ ಜೊತೆ ಸ್ಥಳಕ್ಕೆ ಬಂದ ಪೊಲೀಸರು ಸಮವಸ್ತ್ರದಲ್ಲಿ ಇರಲಿಲ್ಲ. ಆದರೂ ದೊಡ್ಡಮಟ್ಟದ ಗಲಾಟೆಯನ್ನು ತಪ್ಪಿಸುವಲ್ಲಿ ಸಫಲರಾಗಿದ್ದಾರೆ.
ಸ್ಥಳಕ್ಕೆ ಪುರ ಪೊಲೀಸ್ ಠಾಣೆಯ ಪಿಎಸ್ಐ ಹರೀಶ್, ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ರಾಮಚಂದ್ರ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಒಂದು ಗೂಡ್ಸ್ ವಾಹನ ಹಾಗೂ ಅದರ ಮಾಲೀಕ ಸೇರಿದಂತೆ ಕೆಲ ದುಷ್ಕರ್ಮಿಗಳ ಮೇಲೆ ಎರಡು ಠಾಣೆಯಲ್ಲೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಕಾರು ಚಾಲಕನ ಅಜಾಗರೂಕ ಚಾಲನೆ, 7 ಎಮ್ಮೆಗಳು ಸಾವು