ರಾಮನಗರ: ವ್ಯಾಕ್ಸಿನ್ ಖರೀದಿ ಮಾಡಿ ಜನರಿಗೆ ನೀಡುವ ಕುರಿತು ರಾಜ್ಯದಲ್ಲಿನ ನಮ್ಮ ಪಕ್ಷದ ಎಲ್ಲಾ ಶಾಸಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ನಿರ್ಧಾರ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ ತಾಲೂಕಿನ ಕೂಟಗಲ್ ಗ್ರಾಮದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಗಾಗಲೇ ಕಾಂಗ್ರೆಸ್ ಪಕ್ಷದ ಎಂಎಲ್ಎ, ಎಂಪಿ, ಎಂಎಲ್ಸಿ ಫಂಡ್ ಜೊತೆಗೆ ನಮ್ಮದು ಹಣ ಹಾಕ್ತೇವೆ. ಕೇವಲ ಬೆಡ್, ಆಕ್ಸಿಜನ್ ವ್ಯವಸ್ಥೆ ಮಾಡಿದರೆ ಸಾಲದು. ವ್ಯಾಕ್ಸಿನ್ ವ್ಯವಸ್ಥೆ ಕೂಡ ಜನರಿಗೆ ಬೇಕಿದೆ, ಹಾಗಾಗಿ ಪಕ್ಷದಿಂದ ಈ ನಿರ್ಧಾರ ಮಾಡಿದ್ದೇವೆ ಎಂದರು.
ಸರ್ಕಾರದ ಕಾರ್ಯವೈಖರಿಯನ್ನು ನೀವೇ ನೋಡ್ತಿದ್ದೀರಿ. ಶಾಸಕರು, ಸಚಿವರು, ಅಧಿಕಾರಿಗಳು ಯಾವ ರೀತಿ ಕೆಲಸ ಮಾಡ್ತಿದ್ದಾರೆಂದು ಜನತೆ ಗಮನಿಸುತ್ತಿದ್ದಾರೆ. ಈ ರಾಜ್ಯದ ಜನರನ್ನ ಆ ದೇವರೇ ಕಾಪಾಡಬೇಕಿದೆ ಎಂದರು.
ಹಾಗೆಯೇ ಸಚಿವ ಸಿ.ಪಿ.ಯೋಗೇಶ್ವರ್ ವಿಚಾರವಾಗಿ ಡಿಕೆಶಿ ಮೌನ ವಹಿಸಿದ್ದು, ಅವರು ದೊಡ್ಡವರು ಬಿಡಿ ಮಾತನಾಡಲ್ಲ ಎಂದು ಹೊರಟುಬಿಟ್ಟರು.