ರಾಮನಗರ: ಯಾರಾದರೂ ಕೋವಿಡ್ ಪರಿಸ್ಥಿತಿಯ ದುರ್ಲಾಭವನ್ನು ಪಡೆದುಕೊಂಡು ಹಣ ಸುಲಿಗೆ ಮಾಡಲೆತ್ನಿಸಿದರೆ ಮುಲಾಜಿಲ್ಲದೆ ಕ್ರಮ ಕೈಕೊಳ್ಳಲಾಗುವುದು ಹಾಗೂ ಬಂಧಿಸಿ ಜೈಲಿಗೆ ಹಾಕಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದರು.
ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ಮಾಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಬಗ್ಗೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಯಾರಾದರೂ ಆಮ್ಲಜನಕ, ಹಾಸಿಗೆಗಳು, ರೆಮ್ಡಿಸಿವಿರ್, ಆಂಬ್ಯುಲೆನ್ಸ್, ಚಿತಾಗಾರ ಸೇರಿದಂತೆ ಮತ್ತಿತರೆ ಯಾವುದೇ ಸ್ಥಿತಿ ಇರಲಿ, ಪರಿಸ್ಥಿತಿಯ ದುರ್ಲಾಭ ಮಾಡಿಕೊಳ್ಳಲು ಯತ್ನಿಸಿದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಅತ್ಯಂತ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.
ಯಾರಿಗೆ ಸಮಸ್ಯೆಯಾದರೂ ಹೆಲ್ಪ್‌ಲೈನ್ ಸಂಖ್ಯೆ 112ಕ್ಕೆ ಕರೆ ಮಾಡಿದರೆ ಸಾಕು. ತತ್‌ಕ್ಷಣವೇ ಸ್ಪಂದನೆ ಸಿಗುತ್ತದೆ. ಯಾರಾದರೂ ಹಣಕ್ಕೆ ಡಿಮ್ಯಾಂಡ್ ಮಾಡಿದರೆ ದೂರು ನೀಡಬಹುದು. ಅಲ್ಲಿ ದೂರು ನೀಡಿದರೆ ಖಂಡಿತವಾಗಿಯೂ ಕ್ರಮ ಜರುಗಿಸಲಾಗುವುದು ಎಂದು ನಾನು ಖಾತರಿ ಕೊಡುತ್ತೇನೆ ಅಂತಾ ಡಿಸಿಎಂ ಭರವಸೆ ನೀಡಿದರು.
ಪ್ರಾಥಮಿಕ ಹಂತದಲ್ಲಿ ರೆಮ್ಡಿಸಿವಿರ್ ಬೇಡ
ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಪಾಸಿಟಿವ್ ಬಂದರೆ ಅವರಿಗೆ ಕೂಡಲೇ ರೆಮ್ಡಿಸಿವಿರ್ ಕೊಡುವ ಅಗತ್ಯವಿಲ್ಲ. ಆರಂಭದಿಂದಲೇ ಚಿಕಿತ್ಸೆ ಪಡೆದರೆ ಯಾವ ಸಮಸ್ಯೆಯೂ ಆಗುವುದಿಲ್ಲ ಎಂದು ಜನರಿಗೆ ಧೈರ್ಯ ತುಂಬಿದರು.
ಸದ್ಯದ ಸ್ಥಿತಿಯಲ್ಲಿ ಪ್ರತಿದಿನ 24,000 ವೈಲ್ ರೆಮ್ಡಿಸಿವಿರ್ ಕೊಡಲು ಸಾಧ್ಯವಾಗುತ್ತದೆ. ಅದು ಸದ್ಬಳಕೆ ಆಗುವ ಹಾಗೂ ಅಗತ್ಯವಿರುವವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಔಷಧಿ ಕೊರತೆ ಆಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲಾಸ್ಪತ್ರೆಗೆ 10 ದಿನದಲ್ಲಿ ಆಕ್ಸಿಜನ್ ಸಂಗ್ರಹ ಘಟಕ
ನಿನ್ನೆ ಒಂದೇ ದಿನ 550 ಸೋಂಕಿತರು ಪತ್ತೆಯಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ 3,000 ಸೋಂಕಿತರು ಇದ್ದಾರೆ. ಈ ಪ್ರಮಾಣದಲ್ಲಿ ಕೇವಲ ಶೇ.10ರಷ್ಟು ಸೋಂಕಿತರಿಗೆ ಆಕ್ಸಿಜನ್ ಮತ್ತು ಬೆಡ್‌ಗಳ ಅಗತ್ಯವಿದೆ. ಆದರೆ, ಸರಕಾರ ಶೇ.20-30ರಷ್ಟು ಸೋಂಕಿತರಿಗೂ ಆಕ್ಸಿಜನ್ ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಈ ಹಿಂದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕೋವಿಡ್ ಕಾಲ್ ಸೆಂಟರ್ ಮಾಡುತ್ತಿದ್ದೇವೆ. ಇನ್ನು ಹತ್ತೇ ದಿನದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಂಗ್ರಹಕ್ಕೆ ಟ್ಯಾಂಕ್‌ನ್ನು ಅಳವಡಿಸಲಾಗುತ್ತಿದೆ. ಪ್ರತಿ ನಿಮಿಷಕ್ಕೆ 1000 ಕೆಎಲ್ ಆಮ್ಲಜನಕ ಪೂರೈಕೆ ಮಾಡುವ ಆಕ್ಸಿಜನ್ ಜನರೇಟರ್ ಹಾಕಲಿಕ್ಕೂ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಕೆಲ ದಿನಗಳಲ್ಲೇ ಇವೆಲ್ಲ ಸೌಲಭ್ಯಗಳು ಕಾರ್ಯಾಚರಣೆಗೆ ಬರಲಿವೆ ಎಂದು ಡಿಸಿಎಂ ಮಾಹಿತಿ ನೀಡಿದರು.