ರಾಮನಗರ: ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಅನ್ನೋದು ಸುಳ್ಳು ಸುದ್ದಿ. ಸ್ಪೀಕರ್ ಕೂಡ ಈಗಾಗಲೇ ನನಗೆ ಯಾವುದೇ ರಾಜೀನಾಮೆ ನೀಡಿಲ್ಲ ಎಂದಿದ್ದಾರೆ. ನಾನು ಆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತಾಡುತ್ತೇನೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.
ತಾಲೂಕಿನ ಮನಮಾನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ವಿದೇಶ ಪ್ರವಾಸ ಖಾಸಗಿ ಕಾರ್ಯಕ್ರಮ ಅಷ್ಟೇ. ಸ್ವಾಮೀಜಿಗಳ ಆಹ್ವಾನದ ಮೇರೆಗೆ ಹೋಗಿದ್ದಾರೆ. ನಾನು ಅನಿವಾರ್ಯ ಕಾರಣಗಳಿಂದ ಹೋಗಲಾಗಿಲ್ಲ ಎಂದರು.
ಆನಂದ್ ಸಿಂಗ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಶಾಸಕರೂ ರಾಜೀನಾಮೆ ನೀಡ್ತಿಲ್ಲ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಇದೆಲ್ಲಾ ಊಹಾಪೋಹ ಅಷ್ಟೇ ಎಂದರು.
ಹೈನುಗಾರಿಕೆ ಮೂಲಕ ರೈತರಿಗೆ ಶಕ್ತಿ ತುಂಬುವ ಕೆಲಸ ಹೆಚ್ಡಿಕೆ ಮಾಡುತ್ತಿದ್ದಾರೆ. ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದಾರೆ. ರೈತರ ಸಾಲಮನ್ನಾ ಮೂಲಕ ರೈತರ ಕಣ್ಣೀರು ಒರೆಸಲು ಅವಿರತ ಪ್ರಯತ್ನ ಮಾಡಿದ್ದಾರೆ. ಸದ್ಯ ಮಾವು ಸಂಸ್ಕರಣಾ ಘಟಕಕ್ಕೆ ಚಿಂತನೆ ನಡೆಸಲಾಗಿದೆ ಮತ್ತು ವಿವಿಧ ಉಪ ಉತ್ಪನ್ನಗಳ ತಯಾರಿಕೆಗೂ ಸಿದ್ಧತೆ ನಡೆದಿದೆ ಎಂದು ಹೇಳಿದರು.
ನೀರಿನ ಅಭಾವ ಹೆಚ್ಚಾಗಿರೋದ್ರಿಂದ ಹನಿ ನೀರಾವರಿಗೆ ಒತ್ತು ನೀಡುವಂತೆ ಮನವಿ ಮಾಡಿದರು. ಕಡಿಮೆ ನೀರಿನಲ್ಲಿ ಬೆಳೆ ಹೆಚ್ಚಾಗಿ ಬೆಳೆದು ಆರ್ಥಿಕಮಟ್ಟ ಸುಧಾರಣೆಗೆ ಮುಂದಾಗುವಂತೆ ರೈತರಿಗೆ ಕಿವಿಮಾತು ಹೇಳಿದರು. ಅಲ್ಲದೆ ಸಿಲ್ಕ್ ಪ್ರೊಸೆಸಿಂಗ್ ಯೂನಿಟ್ ಬಗ್ಗೆ ಮುಖ್ಯಮಂತ್ರಿಗಳೇ ಗಮನಹರಿಸಿದ್ದು, ಸದ್ಯದಲ್ಲೇ ಸಾಕಾರಗೊಳ್ಳಲಿದೆ ಎಂದರು.