ರಾಮನಗರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಗರದಲ್ಲಿ ಹಸು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ಪಟ್ಟಣದ ಹಳೆ ಮಸೀದಿ ಮೊಹಲ್ಲಾ ನಿವಾಸಿ ಉಸ್ಮಾನ್ ಪಾಷ (30) ಬಂಧಿತ ಪ್ರಮುಖ ಆರೋಪಿ. ಈತನಿಂದ ಹಸುಗಳನ್ನು ಖರೀದಿ ಮಾಡುತ್ತಿದ್ದ ತುಮಕೂರಿನ ಬಿ.ಜೆ. ಪಾಳ್ಯ ಸರ್ಕಲ್ ನಿವಾಸಿ ಅಪ್ಸರ್ ಪಾಷ ಹಾಗೂ ಮತ್ತೋರ್ವ ಆರೋಪಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರು ಜಿಲ್ಲೆಯಲ್ಲಿ ಈ ಹಿಂದೆ ನಾಲ್ಕು ಕಡೆ ಹಾಗೂ ತುಮಕೂರಿನಲ್ಲಿ ಒಂದು ಕಡೆ ಹಸುಗಳ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಾದ ಅಕ್ರಮ ಸಾಗಾಣೆ...
ಜಿಲ್ಲೆಯಲ್ಲಿ ಜಾನುವಾರುಗಳ ಅಕ್ರಮ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ಕಳೆದ ಮೂರು ತಿಂಗಳಲ್ಲಿ ಪೊಲೀಸರು ಹತ್ತಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದ್ದು, ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಜೈಲಿಗೆ ಕಳುಹಿಸಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇತ್ತೀಚೆಗೆ ಆಟೋವೊಂದರಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಕರುಗಳನ್ನು ಸಾಗಿಸುತ್ತಿದ್ದ ತಂಡವೊಂದನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಅದಾದ ನಂತರದಲ್ಲಿಯೂ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಅತ್ಯಂತ ಕಿರಿದಾದ ವಾಹನಗಳಲ್ಲಿ ಹಸು, ದನಗಳನ್ನು ತುಂಬಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಣೆ ಮಾಡಲಾಗುತ್ತಿದೆ. ಹೀಗೆ ಸಾಗಿಸುವಾಗಲೇ ಸಾಕಷ್ಟು ಜಾನುವಾರುಗಳು ಅಸುನೀಗುತ್ತಿವೆ ಎಂದು ಪೊಲೀಸರು ಹೇಳುತ್ತಾರೆ.