ರಾಯಚೂರು: ನಾರಾಯಣಪುರ(ಬಸವಸಾಗರ)ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ರಾಯಚೂರು ಜಿಲ್ಲೆಯ ಕೃಷ್ಣ ನದಿಯಿಂದ ಸುತ್ತಲಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ನಾರಾಯಣಪುರ ಜಲಾಶಯದ 24 ಗೇಟ್ಗಳ ಪೈಕಿ 20 ಗೇಟ್ಗಳ ಮೂಲಕ 1.80 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಸದ್ಯ ನದಿಗೆ ಹರಿಬಿಡಲಾಗಿದೆ. ಹೀಗಾಗಿ ಬಲ ಭಾಗದಲ್ಲಿ ಹರಿಯುತ್ತಿರುವ ಕೃಷ್ಣ ನದಿ ನೀರಿನಿಂದ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.
ಲಿಂಗಸುಗೂರು ತಾಲೂಕಿನ ಶೀಲಹಳ್ಳಿ-ಹಂಚಿನಾಳ ಮಧ್ಯ ನಿರ್ಮಿಸಿರುವ ಶೀಲಹಳ್ಳಿ ಸೇತುವೆ ಸಂಪೂರ್ಣ ಜಲಾವೃತ್ತಗೊಂಡಿದೆ. ಈ ಸೇತುವೆಯು ಕಡದರಗಡ್ಡಿ, ಹಂಚಿನಾಳ, ಯಳಗೊಂದಿ, ಯರಗೋಡಿ ಹಾಗೂ ಜಲಾದುರ್ಗಕ್ಕೆ ಸಂಪರ್ಕ ಕಲ್ಪಿಸುತಿತ್ತು. ಸದ್ಯ ಸೇತುವೆ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ನದಿ ಪಾತ್ರದಲ್ಲಿ ಕೆಲ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದು, ನದಿಗೆ ಇನ್ನಷ್ಟು ಹರಿದು ಬಿಟ್ಟರೆ ಕೆಲ ಗ್ರಾಮಗಳಿಗೆ ನೀರು ನುಗ್ಗವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.