ರಾಯಚೂರು: ನಗರದಲ್ಲಿ ಪ್ರತಿ ನಿತ್ಯ ಸಂಗ್ರಹವಾಗುವ ಕಸವನ್ನು ಸಮರ್ಪಕವಾಗಿ ವಿಂಗಡಣೆ ಮಾಡದೆ, ಯಕ್ಲಾಸಪುರ ಬಳಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹಿಸುತ್ತಿರುವ ಪರಿಣಾಮ ದುರ್ನಾತ ಬೀರುತ್ತಿದ್ದು, ಸುತ್ತಲಿನ ನಿವಾಸಿಗಳು ನಗರಸಭೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದತ್ತಿದ್ದಾರೆ.
ನಗರದ ಯಕ್ಲಾಸಪುರ ರಸ್ತೆಯಲ್ಲಿರುವ ಘನತ್ಯಾಜ್ಯ ಘಟಕಕ್ಕೆ ನಿತ್ಯವೂ ಟನ್ ಗಟ್ಟಲೆ ಸಂಗ್ರವಾಗುವ ಹಸಿ ಒಣ ಕಸವನ್ನು ವಿಂಗಡಿಸಿ, ಮರುಬಳಕೆ ಮಾಡಲಾಗುತ್ತಿತ್ತು. ಕಸ ಬೇರ್ಪಡಿಸಿ, ಹಸಿ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಬೇಕಿದ್ದ ನಗರಸಭೆ ಯಾವುದನ್ನು ಮಾಡದೆ ತ್ಯಾಜ್ಯ ಘಟಕವನ್ನು ಒಂದು ದೊಡ್ಡ ಕಸದ ತಿಪ್ಪೆಯನ್ನಾಗಿಸಿದೆ.
ಘನತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರು ಮಾಡುವ ನಿಟ್ಟಿನಲ್ಲಿ ಪರಿಸರ ನೈರ್ಮಲ್ಯ ಕಾಪಾಡುವ ಕೆಲಸ ನಗರಸಭೆ ಮಾಡಿಕೊಂಡು ಬರುತ್ತಿತ್ತು. ಆದರೆ, ಮೂರು ವರ್ಷಗಳಿಂದ ಘನ ತ್ಯಾಜ್ಯ ಘಟಕದಲ್ಲಿ ಗೊಬ್ಬರ ಕಾರ್ಯ ಸ್ಥಗಿತಗೊಂಡಿದ್ದು, ಸಂಗ್ರಹ ಘಟಕದಲ್ಲಿ ತ್ಯಾಜ್ಯ ಹಾಕಲು ಸ್ಥಳವಿಲ್ಲದೆ ರಸ್ತೆಯ ಮೇಲೆ ಅಥವಾ ಎಲ್ಲೆಂದರಲ್ಲಿ ಹಾಕುವ ಸ್ಥಿತಿ ನಿರ್ಮಾಣ ವಾಗಿದೆ.
ಪ್ಲಾಸ್ಟಿಕ್‌ಗಳನ್ನು ಪುನರ್ ಬಳಕೆಗಾಗಿ ಪ್ಲಾಸ್ಟಿಕ್ ಕಂಪನಿಗಳಿಗೆ ಕಳುಹಿಸಿ ಕೊಡಬೇಕಿತ್ತು, ಒಣ ಕಸ ಬೇರ್ಪಡಿಸಿ ಗೊಬ್ಬರ ತಯಾರಿಸುವ ಪ್ರಕ್ರಿಯೆ ಸ್ಥಗಿತಗೊಂಡಿದ್ದೇ ಕಸ ಸಂಗ್ರಹ ಹೆಚ್ಚಾಗಲು ಕಾರಣವಾಗಿದೆ.
ಕಸ ಸಂಗ್ರಹ ಹೆಚ್ಚಾದ ಪರಿಣಾಮ, ಕಳೆದ ಬೇಸಿಗೆ ಸಮಯದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದರಿಂದ ವಿಪರೀತ ವಾಯುಮಾಲಿನ್ಯ ಕೂಡ ಉಂಟಾಗಿತ್ತು. ಘನತ್ಯಾಜ್ಯ ಘಟಕದಲ್ಲಿ ಕಸ ವಿಂಗಡಣೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.