ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಕ್ಕಳು ನಿರಂತರ ಶಾಲೆಯೊಂದಿಗೆ ಸಂಪರ್ಕ ಹೊಂದಿರಲು ಸರ್ಕಾರ ಜಾರಿಗೆ ತಂದಿರುವ ವಿನೂತನ ಕಾರ್ಯಕ್ರಮಗಳ ಅನುಷ್ಠಾನ ಚುರುಕುಗೊಂಡಿವೆ.
ಈಗಾಗಲೇ ಮಕ್ಕಳ ಸಂಖ್ಯೆಯನ್ನಾಧರಿಸಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳು ಬಂದಿವೆ. ಆಯಾ ಶಾಲೆಗಳ ಮುಖ್ಯ ಶಿಕ್ಷಕರ ಮೂಲಕ ಪಾಲಕರು ಹಾಗೂ ಮಕ್ಕಳನ್ನು ಶಾಲೆಗಳಿಗೆ ಕರೆಯಿಸಿ ಹಂಚಿಕೆ ಮಾಡಲು ಸೂಚಿಸಲಾಗಿದೆ.
ಶೈಕ್ಷಣಿಕ ವರ್ಷದ 37 ದಿನ ಬಿಸಿಯೂಟದ ಪಡಿತರವನ್ನು ಶಾಲೆಗೆ ದಾಖಲಾದ ಮಕ್ಕಳಿಗೆ ನಿಯಮ ಆಧರಿಸಿ ಹಂಚಿಕೆ ಕೂಡ ಮಾಡಲಾಗುತ್ತಿದೆ. ಈ ಎಲ್ಲಾ ಸೌಲಭ್ಯಗಳ ಹಿಂದೆ ಮಕ್ಕಳ ಶೈಕ್ಷಣಿಕ ಆಸಕ್ತಿ ಹೆಚ್ಚಿಸುವ ಮಹಾದಾಸೆ ಹೊಂದಲಾಗಿದೆ ಎಂಬುದು ಶಿಕ್ಷಣ ಇಲಾಖೆ ಅಂಬೋಣ.
ಭೌತಿಕವಾಗಿ ಶಾಲೆಗಳು ಆರಂಭಗೊಳ್ಳುವವರೆಗೆ ಮಕ್ಕಳು ನಿರಂತರ ಶಾಲೆಯೊಂದಿಗೆ ಸಂಪರ್ಕ ಹೊಂದಿರಲು ರಾಜ್ಯ ಸರ್ಕಾರ ವಿದ್ಯಾಗಮ, ವರ್ಕ್ ಫ್ರಮ್ ಹೋಂ ಸೇರಿದಂತೆ ಆನ್ಲೈನ್ ಶಿಕ್ಷಣ ನೀಡಲು ಸಲಹೆ, ಸೂಚನೆ ನೀಡಿದೆ. ಇದರಂತೆ ಶಿಕ್ಷಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅಸಮಾಧಾನ : ವಿದ್ಯಾಗಮ, ವರ್ಕ್‌ಫ್ರಮ್ ಹೋಂ ಕಾರ್ಯಕ್ರಮ ಬಹುತೇಕ ಶಿಕ್ಷಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೊರೊನಾ ರಜೆ ಕೇಳಿದ್ದೇ ತಪ್ಪಾಯ್ತು ಎಂಬ ಮಾತು ಚರ್ಚೆಯಾಗುತ್ತಿವೆ. ಆಡಿಯೋ, ವಿಡಿಯೋ, ವೆಬ್ ಅಪ್ಲೋಡ್ ಏನೊಂದೂ ತಿಳಿಯದಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕ ಸಮೂಹ ಅಸಮಾಧಾನ ವ್ಯಕ್ತಪಡಿಸಿದೆ.
ದೂರದರ್ಶನ ಶಿಕ್ಷಣ ಮರೀಚಿಕೆ : ರಾಜ್ಯ ಸರ್ಕಾರ ದೂರದರ್ಶನದ ಮೂಲಕ ಪ್ರೌಢಶಾಲಾ ಮಕ್ಕಳಿಗೆ ವಿಷಯವಾರು ಬೋಧನೆ ಆರಂಭಿಸಿದೆ. ಮೊದಲ ದಿನವೇ ಪಟ್ಟಣ ಪ್ರದೇಶಗಳಾದ ಮುದಗಲ್ಲ, ಹಟ್ಟಿ, ಲಿಂಗಸುಗೂರಲ್ಲಿಯೇ ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ಮಕ್ಕಳು ನಿರಾಶೆ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ, ದೊಡ್ಡಿ, ತಾಂಡಾ ಪ್ರದೇಶದಲ್ಲಿ ದೂರದರ್ಶನ ಶಿಕ್ಷಣ ನಿಗದಿತವಾಗಿ ಪ್ರಸಾರವಾಗದೆ ಪಾಲಕರು ಕೂಡಾ ಆಕ್ರೋಶ ವ್ಯಕ್ತಪಡಿಸಿಸಿದ್ದಾರೆ.