ರಾಯಚೂರು : ನಾರಾಯಣಪುರ ಬಲದಂಡೆ ನಾಲೆಯಿಂದ 5A ಕಾಲುವೆ ಯೋಜನೆ ಜಾರಿಗಾಗಿ ಆಗ್ರಹಿಸಿ ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಬಳಿ ರೈತರು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದ್ರೆ, ಯೋಜನೆಯ ಅನುಷ್ಠಾನಕ್ಕೆ ಸ್ಪಂದನೆ ದೊರೆಯದಿದ್ದರಿಂದ ನಾನಾ ಗ್ರಾಮಗಳು ಗ್ರಾಪಂ ಚುನಾವಣೆ ಬಹಿಷ್ಕರಿಸಲು ಮುಂದಾಗಿವೆ.
ಮಸ್ಕಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಂಕುಶದೊಡ್ಡಿ, ಪಾವನಕಲ್ಲೂರು, ಅಮೀನಗಡ, ವಟಗಲ್ ಗ್ರಾಮ ಪಂಚಾಯತ್‌ಗಳಲ್ಲಿ ಪ್ರತಿಜ್ಞೆ ವಿಧಿ ಸ್ವೀಕರಿಸುವ ಮೂಲಕ ಚುನಾವಣೆ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದಾರೆ.
ಎನ್ಆರ್ಬಿಸಿ ಯೋಜನೆಯಡಿ 5A ಕಾಲುವೆ ಕಾಮಗಾರಿ ಆರಂಭಿಸಿದರೆ ಮಸ್ಕಿ ತಾಲೂಕಿನ ಲಕ್ಷಾಂತರ ಎಕರೆ ನೀರಾವರಿ ಪ್ರದೇಶವಾಗಲಿದೆ. ಇದರಿಂದ ರೈತರಿಗೆ ವ್ಯವಸಾಯಕ್ಕೆ ಸಹಕಾರವಾಗಲಿದೆ. ಈ ಬಗ್ಗೆ ಹಲವಾರು ಬಾರಿ ಹೋರಾಟ ನಡೆಸಿದ್ರೂ, ಸರ್ಕಾರ ಕ್ಯಾರೆ ಎಂದಿಲ್ಲ. ಹೀಗಾಗಿ ಮುಂಬರುವ ಗ್ರಾಮ ಪಂಚಾಯತ್ ಎಲೆಕ್ಷನ್ ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.