ರಾಯಚೂರು: ಆಹಾರದ ರುಚಿ ಮತ್ತು ಉತ್ತಮ ಆರೋಗ್ಯ ಗಮನದಲ್ಲಿಟ್ಟುಕೊಂಡು ನಗರದಲ್ಲಿ ಮಣ್ಣಿನ ಪಾತ್ರೆಗಳ ಮಾರಾಟಕ್ಕೆ ರಾಜಸ್ಥಾನ ಮೂಲದ ವ್ಯಾಪಾರಿ ಮುಂದಾಗಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಇಲ್ಲಿನ ಎಲ್ಐಸಿ ಕಚೇರಿ ಎದುರು ಕಳೆದ 12 ವರ್ಷಗಳಿಂದ ದೀಪಾವಳಿ ಹಬ್ಬಕ್ಕೆ ರಾಜಸ್ಥಾನದಲ್ಲಿ ತಯಾರಿಸಿದ ಜೇಡಿ ಮಣ್ಣಿನ ವಿವಿಧ ಪಾತ್ರೆಗಳಾದ ಕಪ್, ಜಗ್, ಗ್ಲಾಸ್, ನೀರಿನ ಕೊಳವೆ ಸೇರಿದಂತೆ ಇತರೆ ಅಡುಗೆ ಮನೆಗೆ ಉಪಯೋಗಿಸುವ ವಸ್ತುಗಳು, ಗೃಹ ಅಲಂಕಾರಿಕ ವಸ್ತುಗಳು, ಹಬ್ಬದ ದೀಪಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ.
ಉತ್ತಮ ಆಹಾರ ಶೈಲಿಯನ್ನು ಇಷ್ಟ ಪಡುವ ನಗರ ಪ್ರದೇಶದ ಜನರು ಈಗ ಗ್ರಾಮೀಣ ಭಾಗದ ಕೆಲವು ಅಡುಗೆ ವಿಧಾನಗಳನ್ನು ಅನುಸರಿಸಲು ಮುಂದಾಗಿದ್ದಾರೆ. ಸ್ಟೀಲ್, ಅಲ್ಯೂಮಿನಿಯಂ, ನಾನ್ ಸ್ಟಿಕ್ ಪಾತ್ರೆಗಳಲ್ಲಿ ತಯಾರಿಸಿದ ಆಹಾರಕ್ಕೂ ಮಣ್ಣಿನ ಪಾತ್ರೆಗಳಲ್ಲಿ ಮಾಡಿದ ಆಹಾರದ ರುಚಿಗೂ ತುಂಬಾ ವ್ಯತ್ಯಾಸವಿದೆ. ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ತುಂಬಾ ರುಚಿಯಾಗಿರುತ್ತದೆ. ಈ ಪಾತ್ರೆಗಳಲ್ಲಿ ಉಷ್ಣತೆ ಮತ್ತು ತೇವಾಂಶದ ಸಮತೋಲನ, ಪಾತ್ರೆಯ ನೈಸರ್ಗಿಕ ಗುಣಗಳು ಅಹಾರಕ್ಕೆ ವಿಶಿಷ್ಟ ರುಚಿ ಹೆಚ್ಚಿಸುತ್ತವೆ.
ಮಣ್ಣಿನ ಪಾತ್ರೆಗಳಲ್ಲಿ ತಯಾರಿಸಿದ ಆಹಾರದಲ್ಲಿ ಆಮ್ಲೀಯ ಗುಣ ತಟಸ್ಥಗೊಳ್ಳುತ್ತದೆ. ಅಲ್ಲದೆ ಆಹಾರದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಸಲ್ಪರ್ ಪ್ರಮಾಣ ಹೆಚ್ಚಾಗಿ ಇರುವುದರಿಂದ ಉತ್ತಮ ಆರೋಗ್ಯಕ್ಕೆ ಪೂರಕ ಎನ್ನುವ ಮನೋಭಾವ ನಗರವಾಸಿಗಳದ್ದಾಗಿದೆ.