ರಾಯಚೂರು: ಕ್ರಿಕೆಟ್ ಜನಕರ ನಾಡಲ್ಲಿ ನಿನ್ನೆಯಷ್ಟೇ ವಿಶ್ವಕಪ್ ಮಹಾಟೂರ್ನಿಗೆ ತೆರೆ ಬಿದ್ದಿದೆ. ಇದೀಗ ಜುಲೈ 21ರಿಂದ ಅಂಡರ್-19 ತ್ರಿಕೋನ ಸರಣಿ ನಡೆಯಲಿದ್ದು, ಟೀಂ ಇಂಡಿಯಾಕ್ಕೆ ಕರುನಾಡಿನ ಇಬ್ಬರು ಪ್ರತಿಭೆಗಳು ಆಯ್ಕೆಯಾಗಿದ್ದು, ರಾಯಚೂರಿನ ಯುವ ಬೌಲರ್ ಕೂಡ ಸ್ಥಾನ ಪಡೆದಿದ್ದಾನೆ.
ಕರ್ನಾಟಕದಿಂದ ಆಯ್ಕೆಯಾಗಿರುವ ಇಬ್ಬರಲ್ಲಿ ರಾಯಚೂರು ಜಿಲ್ಲೆಯ ವಿದ್ಯಾಧರ ಪಾಟೀಲ್ ಕೂಡ ಒಬ್ಬರು. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿಲನಾಡಿನ ಯುವಕ ಮಿಂಚಲಿದ್ದಾನೆ. ವೇಗದ ಬೌಲರ್ ಆಗಿರುವ ವಿದ್ಯಾಧರ ಪಾಟೀಲ್ ಮೂಲತಃ ರಾಯಚೂರಿನ ಯರಮರಸ್ ಕ್ಯಾಂಪ್ ನಿವಾಸಿಯಾಗಿದ್ದಾನೆ.
ರಾಯಚೂರು ನಗರದ ಸಿಟಿ ಇಲೆವೆನ್ (CITY-XI) ಕ್ರಿಕೆಟ್ ಕ್ಲಬ್ ಕೋಚ್ ಆಗಿರುವ ವೆಂಕಟರೆಡ್ಡಿಯವರೇ ವಿದ್ಯಾಧರನ ಕ್ರಿಕೆಟ್ ಗುರು. ಅಲ್ಲದೇ ರಾಯಚೂರು ವಲಯದ ವ್ಯಾಪ್ತಿಗೆ ಬರುವ 6 ಜಿಲ್ಲೆಗಳಲ್ಲಿ ರಾಷ್ಟ್ರದ ತಂಡಕ್ಕೆ ಆಯ್ಕೆಗೊಂಡ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆ ವಿದ್ಯಾಧರನದಾಗಿದೆ.

ಹಿಂದುಳಿದ ಹೈದರಾಬಾದ್-ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಕ್ರಿಕೆಟ್ ಪಟು ದೇಶವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂಗ್ಲೆಂಡ್ನಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಉತ್ತಮ ಬೌಲಿಂಗ್ ಮಾಡುವ ಮೂಲಕ ಭಾರತ ತಂಡವನ್ನ ಗೆಲ್ಲಿಸಬೇಕು. ಈ ಮೂಲಕ ದೇಶ, ರಾಜ್ಯ ಮತ್ತು ಜಿಲ್ಲೆಯ ಹಿರಿಮೆ ಹೆಚ್ಚಿಸಲಿ ಎಂಬುದು ವಿದ್ಯಾಧರ ಪಾಟೀಲ್ ಕೋಚ್, ಕೆಸಿಎಸ್ಸಿ ಸಂಚಾಲಕರು ಹಾಗೂ ಸಹಪಾಠಿಗಳ ಆಶಯವಾಗಿದೆ.