ರಾಯಚೂರು: ಗುಡ್ಡದ ಮೇಲಿನ ಬಂಡೆ ಉರುಳಿ ಬಿದ್ದು ಇಬ್ಬರು ಬಾಲಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಗೌರಮ್ಮಪೇಟೆ ಬಡಾವಣೆಯಲ್ಲಿ ನಡೆದಿದೆ.
ವೀರೇಶ ಹನುಮಂತರಾಯ (13), ರಮೇಶ ಶಿವರಾಜ (10) ಮೃತ ಬಾಲಕರು. ಘಟನೆಯಲ್ಲಿ ಮೌನೇಶ್ ಶಿವರಾಜ್ ಪೂಜಾರಿ ಎಂಬುವವರ ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೌರಮ್ಮಪೇಟೆ ಬಡಾವಣೆಯಲ್ಲಿರುವ ಗುಡ್ಡದ ಮಣ್ಣು ಕಳೆದ ವಾರದಿಂದ ಆಗಾಗ ಸುರಿಯುತ್ತಿರುವ ಮಳೆಗೆ ನೆನೆದಿತ್ತು. ಗುಡ್ಡದ ಪಕ್ಕದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೃಹತ್ ಕಲ್ಲೊಂದು ಜಾರಿ ಬಿದಿದ್ದೆ. ಪರಿಣಾಮ ಮಕ್ಕಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಕುರಿತಂತೆ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಬಡಾವಣೆಯ ನಿವಾಸಿಗಳು ಆತಂಕಗೊಂಡಿದ್ದಾರೆ.