ರಾಯಚೂರು: ಕೆಲಸ ನೀಡಿದ ಮಾಲೀಕನ ಅಂಗಡಿಯಲ್ಲಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ದೋಚಿದ ಇಬ್ಬರು ಕಳ್ಳರನ್ನು ನೇತಾಜಿ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಜಲಾಲ್ ನಗರದ ನಿಖಿಲ್ ಹಾಗೂ ಮಕ್ತಲ್ ಪೇಟೆಯ ಲಕ್ಷ್ಮಿಕಾಂತ್ ಬಂಧಿತ ಆರೋಪಿಗಳು. ಇವರು ನಗರದ ಬಂಗಾರ ಬಜಾರ್ನಲ್ಲಿರುವ ದೋತ್ರಬಂಡಿ ಅಶೋಕ ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ನಿಖಿಲ್ ಕಳೆದ ಒಂದು ವರ್ಷದಿಂದ ಗುಮಾಸ್ತನ ಕೆಲಸ ಮಾಡುತ್ತಿದ್ದರೆ, ಲಕ್ಷ್ಮಿಕಾಂತ್ ಕಳೆದ ಎರಡು ತಿಂಗಳು ಇಲ್ಲಿ ಕೆಲಸ ಮಾಡುತ್ತಿದ್ದ.
ಈ ಇಬ್ಬರು ಅಂಗಡಿಯಲ್ಲಿ ಆಳವಡಿಸಿದ ಸಿಸಿ ಕ್ಯಾಮರಾ ಬಂದ್ ಮಾಡಿ ಅಂಗಡಿಯಲ್ಲಿರುವ ಬಂಗಾರ ಕರಿಮಣಿ ತಾಳಿ ಸರ, ಕಿವಿ ಓಲೆ, ಒಡುವೆಗಳು ಸೇರಿದಂತೆ ಬಂಗಾರದ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದರು. ಅಲ್ಲದೇ ಅಂಗಡಿಯಲ್ಲಿರುವ ಅಲ್ಮೇರಿಯ ಲಾಕರ್ ತಿಳಿದುಕೊಂಡು ಅದರಿಂದ ಸಾಮಾನುಗಳನ್ನು ಸಹ ಕಳ್ಳತನ ಮಾಡುತ್ತಿದ್ದರು.
ದಿನೇ ದಿನೆ ಚಿನ್ನಾಭರಣ ಕಾಣೆಯಾಗುತ್ತಿರುವುದನ್ನು ಗಮನಿಸಿದ ಅಂಗಡಿ ಮಾಲೀಕ ಕೆಲ ದಿನಗಳ ಹಿಂದೆ ನೇತಾಜಿ ನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 11 ಲಕ್ಷ 86 ಸಾವಿರ ರೂ. ಮೌಲ್ಯದ 205 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಇನ್ನು ಪಶ್ಚಿಮ ಠಾಣೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಓರ್ವ ಆರೋಪಿ ಬಂಧಿಸಿದ ಪೊಲೀಸರು ಎರಡೂವರೆ ತೊಲೆ ಬಂಗಾರ ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿ ಆಂಧ್ರದ ಪ್ರಕಾಶಂ ಜಿಲ್ಲೆಯ ಅರ್ಧಮೀಡನ ನೇಹಮೀಯಾ ಎಂದು ಗುರುತಿಸಲಾಗಿದೆ. ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜಕೀಯ ಪ್ರತೀಕಾರದ ಹಿಂಸಾಚಾರ : 12 ಮಂದಿ ಸಾವು, 5 ಮನೆಗಳಿಗೆ ಬೆಂಕಿ