ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದ ಪ್ರಭಾವಿ ರೈತರು ಅನಧಿಕೃತವಾಗಿ ನೀರು ಕಬಳಿಕೆ ಮಾಡುವುದರಿಂದ ಕೆಳ ಭಾಗದ ರೈತರು ನೀರು ಸಿಗದೇ ಪರದಾಡುವಂತಾಗಿದೆ.
ಆರು ಲಕ್ಷ ಎಕರೆ ಕೃಷಿ ಭೂಮಿಗೆ ನೀರೋದಗಿಸುವ ತುಂಗಭದ್ರಾ ಎಡದಂಡೆ ನಾಲೆಗೆ 2000 ಸಾವಿರ ಕೋಟಿ ಖರ್ಚು ಮಾಡಿ ಕಾಂಕ್ರೀಟ್, ಲೈಟಿಂಗ್ ಮಾಡಿದರೂ ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಎಡದಂಡೆ ನಾಲೆಯ ಮುಖ್ಯ ಕಾಲುವೆ ಮತ್ತು ಉಪ ಕಾಲುವೆ ವ್ಯಾಪ್ತಿಯಲ್ಲಿ ಅಂದಾಜು 2 ಲಕ್ಷ ಎಕರೆ ಅಕ್ರಮ ನೀರಾವರಿ ನಡೆಯುತಿರುವುದು, ಇದರ ಮೇಲೆ ಕಟ್ಟು ನಿಟ್ಟಿನ ಕ್ರಮವಾಗಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಈ ಬಗ್ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ತುಂಗಭದ್ರಾ ಎಡದಂಡೆ ನಾಲೆ, ಸಮರ್ಪಕ ನಿರ್ವಹಣೆಯಿಲ್ಲದೆ ರಾಯಚೂರು ಹಾಗೂ ಮಾನ್ವಿ ತಾಲೂಕಿನ ರೈತರಿಗೆ ನೀರು ತಲುಪುತ್ತಿಲ್ಲ. ಕೊನೆ ಭಾಗದ ರೈತರಿಗೆ ನೀರು ತಲುಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಇತ್ತೀಚಿಗೆ ಸಿಎಂ ಯಡಿಯೂರಪ್ಪರನ್ನು ಒತ್ತಾಯಿಸಿದಾಗ, ಕೂಡಲೇ ಪೊಲೀಸ್ ರಕ್ಷಣೆ ಪಡೆದು ಹಗಲು, ರಾತ್ರಿ ಕಾದು ಕಾನೂನು ಬಾಹಿರವಾಗಿ ನೀರು ಪಡೆಯುವುದನ್ನು ತಡೆಯಬೇಕು. ಹಾಗೂ ರೈತರಿಗೆ ನೀರು ಕೊಡುವ ವ್ಯವಸ್ಥೆ ಮಾಡಬೇಕು ಎಂದು ಆದೇಶ ನೀಡಿದ್ದರು. ಆದರೂ ಎರಡು ತಾಲೂಕಿನ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ಮುಖ್ಯ ಮಂತ್ರಿಗಳ ಆದೇಶವಿದ್ದರೂ ನಾಲೆಯ ಮೇಲ್ಬಾಗದಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಆದ್ದರಿಂದ ಕೊಪ್ಪಳ ಡಿಸಿ ಹಾಗೂ ಎಸ್ಪಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.