ರಾಯಚೂರು: ನಗರದ ಮಾವಿನಕರೆಯಲ್ಲಿ ಸಾವಿರಾರು ಮೀನುಗಳು ಸಾವಿಗೀಡಾಗಿದ್ದು, ಸುತ್ತಮುತ್ತಲಿನ ಪರಿಸರ ದುರ್ವಾಸನೆ ಬೀರುತ್ತಿದೆ.
ಬೇಸಿಗೆ ಬಿಸಿಲು ಪ್ರಾರಂಭವಾಗುತ್ತಿದ್ದಂತೆ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಆಮ್ಲಜನಕ ಕೊರತೆ ಉಂಟಾದ ಪರಿಣಾಮ ಮೀನುಗಳು ಮೃತಪಟ್ಟಿವೆ.
ಕೆರೆಯ ಸುತ್ತಮುತ್ತ ಹಾದು ಹೋಗುವಾಗ ದುರ್ವಾಸನೆ ಮೂಗಿಗೆ ಬಡಿಯುತ್ತಿದ್ದು, ವಾಂತಿ ಬರುವಂತಾಗುತ್ತದೆ. ಅಲ್ಲಿನ ಜನರಿಗೆ ಸಾಂಕ್ರಾಮಿಕ ರೋಗದ ಭೀತಿಯನ್ನುಂಟು ಮಾಡಿದೆ.
ಕೆರೆಯ ಪಕ್ಕದಲ್ಲೇ ಉದ್ಯಾನವಿದೆ. ಕೆರೆ ಗಬ್ಬೆದ್ದು ನಾರುತ್ತಿರುವ ಪರಿಣಾಮ ಇಲ್ಲಿಗೆ ಬರುವ ವಾಯುವಿಹಾರಿಗಳಿಗೆ ಕಿರಿಕಿರಿ ಉಂಟಾಗಿದೆ. ಕೆರೆಯಲ್ಲಿ ಇದೇ ಮೊದಲೇನಲ್ಲ, ಅನೇಕ ಬಾರಿ ಮೀನುಗಳ ಮಾರಣ ಹೋಮವಾಗಿದೆ.
ಉದ್ಯಾನದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಅನುದಾನ ಬಂದಿದೆ. ಶೀಘ್ರವೇ ಕಾಮಗಾರಿ ಕೈಗೊಳ್ಳಲಾಗುವುದು ಎನ್ನುತ್ತಾರೆ ನಗರಸಭೆ ಸದಸ್ಯರು.