ರಾಯಚೂರು: ಜಿಲ್ಲೆಯ ನೀರಮಾನವಿ ಗ್ರಾಮದ ಪೂಜಾ ತೃತೀಯ ಲಿಂಗಿಗಳಿಗೆ ಇರುವ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಶಿಕ್ಷಣ ಇಲಾಖೆ ಮಾರ್ಚ್ ತಿಂಗಳಲ್ಲಿ ನಡೆಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅಧಿಕೃತ ತೃತೀಯಲಿಂಗಿ ಮೀಸಲಾತಿಯಲ್ಲಿ ಪರೀಕ್ಷೆ ಬರೆದಿದ್ದರು. ಇದೀಗ ಸಮಾಜ ವಿಜ್ಞಾನ ವಿಷಯದ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು, ನೀರಮಾನವಿ ಗ್ರಾಮ ಸೇರಿದಂತೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ನೀರಮಾನವಿ ಗ್ರಾಮದಲ್ಲಿ ಜನಿಸಿದ ಇವರು, 1 ರಿಂದ 10 ನೇ ತರಗತಿಯವರೆಗೆ ನೀರಮಾನವಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ಮಾನವಿ ಪಟ್ಟಣದಲ್ಲಿ ಪದವಿಪೂರ್ವ, ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿ, ರಾಯಚೂರಿನ ಸರ್ವೋದಯ ಕಾಲೇಜಿನಲ್ಲಿ ಬಿ.ಇಡಿ ಪೂರ್ಣಗೊಳಿಸಿದ್ದರು.
ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಇತ್ತೀಚೆಗೆ ಪ್ರಕಟಿಸಿದ್ದರು. ಹತ್ತು ಮಂದಿ ತೃತೀಯ ಲಿಂಗಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ತೃತೀಯಲಿಂಗಿ ಮೀಸಲಾತಿ ಅಡಿಯಲ್ಲಿ ಮೂವರು ತೃತೀಯ ಲಿಂಗಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ನೀರಮಾನವಿ ಗ್ರಾಮದ ಪೂಜಾ ಕೂಡ ಒಬ್ಬರು. ಶಿಕ್ಷಕಿಯಾಗಿ ಆಯ್ಕೆಗೊಂಡು ಇತರ ತೃತೀಯ ಲಿಂಗಿಗಳಿಗೂ ಮಾದರಿಯಾಗಿದ್ದಾರೆ.
ಎಲ್ಲೋ ಮೂಲೆಯಲ್ಲಿ ಇದ್ದವರಿಗೆ ಹೊಸ ಬೆಳಕು ಮೂಡಿದೆ.. ನಾವು ಇಲ್ಲಿಯವರೆಗೆ ಸಮಾಜದ ಮುಖ್ಯವಾಹಿನಿಗೆ ಬರಲು ಹಿಂದೇಟು ಹಾಕುತ್ತಿದ್ದೆವು. ಸುಪ್ರೀಂಕೋರ್ಟ್ ನಮಗೂ 1 ಪರ್ಸೆಂಟ್ ಮೀಸಲಾತಿ ತೀರ್ಪು ನೀಡಿರುವುದು ಹೊಸ ಆಶಾಭಾವನೆ ಜೊತೆ ಬದುಕಿನ ಬಗೆಗೆ ಭರವಸೆ ಸಹ ಮೂಡಿಸಿದೆ. ಶಿಕ್ಷಕಿ ಆಗಿ ಆಯ್ಕೆಯಾಗಿರುವುದರಿಂದ ಆ ಖುಷಿಯನ್ನು ಸಂಭ್ರಮಿಸುತ್ತಿದ್ದು, ಮಾತೇ ಹೊರಡುತ್ತಿಲ್ಲ ಎಂದು ಪೂಜಾ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಾಥಮಿಕ ಶಿಕ್ಷಕರ ನೇಮಕಾತಿ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ, ಮೊದಲ ಬಾರಿಗೆ 3 ತೃತೀಯ ಲಿಂಗಿಗಳ ಆಯ್ಕೆ