ರಾಯಚೂರು: ಶಾಸಕರುಗಳಲ್ಲಿ ಅಸಮಾಧಾನವಿಲ್ಲ. ಇನ್ನಷ್ಟು ವೇಗವಾಗಿ ಕೆಲಸವಾಗಬೇಕೆಂಬ ಬಯಕೆ ಅವರದ್ದಾಗಿದೆ. ಶಾಸಕಾಂಗ ಸಭೆಯಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ರಾಯಚೂರು ನಗರದ ಹೊರವಲಯದ ಯರಮರಸ್ ಸರ್ಕ್ಯೂಟ್ ಹೌಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು "ಅಧಿವೇಶನ ಹಿನ್ನೆಲೆ ಸಚಿವರುಗಳು ಬ್ಯುಸಿಯಾಗಿದ್ದರು. ಇನ್ನು ಮುಂದೆ ಮತ್ತಷ್ಟು ಕ್ರಿಯಾಶೀಲವಾಗಿ ಸರ್ಕಾರದ ಕೆಲಸ ಮಾಡಲಿದ್ದಾರೆ. ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದಿದೆ. ಅಧಿವೇಶನದ ಕಾರಣ ಇಲಾಖೆ ಸಚಿವರುಗಳು ತೊಡಗಿಸಿಕೊಂಡಿದ್ದರು. ಈಗಾಗಲೇ ಶಾಸಕರುಗಳು ಗಮನಕ್ಕೆ ತಂದಿರುವ ಸಮಸ್ಯೆಗಳನ್ನು ಪರಿಹರಿಸುವ ಕೆಲಸಗಳನ್ನು ಸರ್ಕಾರ ಒಟ್ಟಾಗಿ ಕಾರ್ಯ ನಿರ್ವಹಿಸಲಿದೆ" ಎಂದರು.
ಇದನ್ನೂ ಓದಿ: ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ.ಶರಣಪ್ರಕಾಶ ಪಾಟೀಲ್ ನೇಮಕಕ್ಕೆ ತೀವ್ರ ವಿರೋಧ
ಜಿಲ್ಲೆಯಲ್ಲಿ ಶಾಸಕರ ಏನೇ ಅಸಮಾಧಾನ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅಭಿವೃದ್ಧಿ ವಿಷಯದಲ್ಲಿ ಒಂದಾಗಿ ಕಾರ್ಯ ನಿರ್ವಹಿಸಲಾಗುತ್ತದೆ. ಸಚಿವ ಸ್ಥಾನದ ಕುರಿತು ಶಾಸಕರುಗಳು ಎಐಸಿಸಿಗೆ ಪತ್ರ ಬರೆದಿದ್ದು, ಆಯಿತು ಹೋಯಿತು. ಅಭಿವೃದ್ಧಿಗೆ ಹಿನ್ನೆಡೆಯಾಗದಂತೆ ಒಟ್ಟಾಗಿ ಕೆಲಸ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ನಡೆದಿರುವ ವಿಡಿಯೋ ಚಿತ್ರೀಕರಣ ಘಟನೆ ಬಗ್ಗೆ ಪ್ರತಿಕ್ರಿಯಿಸುತ್ತ, ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಗೃಹ ಇಲಾಖೆ ತನಿಖೆ ಪ್ರಾರಂಭಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗುತ್ತದೆ. ರಾಜಕೀಯವಾಗಿ ಟೀಕೆಗಳು ಏನೇ ಇದ್ದರೂ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಓಪೆಕ್ ಆಸ್ಪತ್ರೆ ನಿರ್ವಹಣೆ ಹಾಗೂ ರಿಮ್ಸ್ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವರು ಇದೇ ವೇಳೆ ಭರವಸೆ ನೀಡಿದರು.
ಶಾಸಕರ ಅಸಮಾಧಾನದ ಬಗ್ಗೆ ಸ್ಪಷ್ಟಪಡಿಸಿದ್ದ ಸಿಎಂ: ಸರ್ಕಾರ ರಚನೆಯಾಗಿ ಕೇವಲ ಎರಡು ತಿಂಗಳಾಗಿದೆ. ಸಣ್ಣ-ಪುಟ್ಟ ಅಸಮಾಧಾನಗಳು ಇರಬಹುದು. ಆದರೆ, ದೂರು ನೀಡುವಷ್ಟು ಅಸಮಾಧಾನ ಕಾಂಗ್ರೆಸ್ ಪಕ್ಕದಲ್ಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಇತ್ತೀಚೆಗೆ ಹಾವೇರಿಯಲ್ಲಿ ಶಾಸಕರ ಅಸಮಾಧಾನದ ಬಗ್ಗೆ ಮಾಧ್ಯಮದವರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದ ಅವರು ''ಸಚಿವರು ತಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು 30 ಶಾಸಕರು ಪತ್ರ ಬರೆಯುವ ಮೂಲಕ ಅಳಲು ತೋಡಿಕೊಂಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಸಚಿವರ ವಿರುದ್ಧ ಶಾಸಕರು ನೀಡಿದ ದೂರಿನ ವಿಚಾರ ಕೂಡ ನನ್ನ ಗಮನಕ್ಕೆ ಬಂದಿಲ್ಲ'' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಶಾಸಕರು ದೂರು ನೀಡಿದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ
ಶಾಸಕರು ಪತ್ರ ಬರೆದಿರುವುದು ಒಳ್ಳೆಯ ಬೆಳವಣಿಗೆ: ಶಾಸಕರು ಸಚಿವರ ವಿರುದ್ಧ ಪತ್ರ ಬರೆದಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಶಾಸಕರಿಗೆ ನಮ್ಮಿಂದ ಅನಾನುಕೂಲ ಆಗಿರುವ ಕುರಿತು ನಾವು ಸೂಕ್ತವಾಗಿ ಸ್ಪಂದಿಸಲು ಇದು ಸಹಕಾರಿ ಆಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಸಕರು ಪತ್ರ ಬರೆದಿರುವ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ಶಾಸಕರು ಪತ್ರ ಬರೆದಿರುವುದು ಒಳ್ಳೆಯ ಬೆಳವಣಿಗೆ: ಸಚಿವ ಮಧು ಬಂಗಾರಪ್ಪ