ರಾಯಚೂರು : ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಹೂರ್ತ ನಿಗದಿಗೂ ಮುನ್ನವೇ ಪ್ರಚಾರ ರಂಗೇರುತ್ತಿದೆ. ಆದ್ರೆ, ತಾಲೂಕಿನ ಬುದ್ದಿನ್ನಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಈ ಗ್ರಾಮದಲ್ಲಿ ಸುಂದರ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಆದ್ರೆ, ಈ ಕಟ್ಟಡ ಯಾವ ಶಾಲೆಗೆ ಸೇರಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯಡಿ 4 ಎಕರೆ ಭೂಮಿಯಲ್ಲಿ ₹1.31ಕೋಟಿ ವೆಚ್ಚದಲ್ಲಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕು ಎರಡು ವರ್ಷವಾಗಿದೆ. ಇದೀಗ ಕಾಮಗಾರಿಯೇನೋ ಮುಗಿದಿದೆ.
ಇದೇ ಶಾಲೆಗೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ಒಟ್ಟು 30 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲಾಗ್ತಿದೆ. ಆದ್ರೆ, ಇದು ಪ್ರಾಥಮಿಕ ಶಾಲೆಯೋ ಅಥವಾ ಪ್ರೌಢ ಶಾಲೆಯೋ ಎಂಬ ಮಾಹಿತಿಯೇ ಇಲ್ಲ.
ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಇಲ್ಲಿ ಪ್ರೌಢಶಾಲೆ ಮಂಜೂರಾಗಿಲ್ಲ. ಗ್ರಾಮದ ಮಕ್ಕಳು ಗ್ರಾಮದಲ್ಲೇ ಶಿಕ್ಷಣ ಮುಂದುವರೆಸಲು ಪ್ರೌಢಶಾಲೆಗೆ ಅನುಮತಿ ದೊರೆಯಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲವೆನ್ನುವ ಆರೋಪ ಕೇಳಿಬಂದಿವೆ. ಹೀಗಾಗಿ, ಗ್ರಾಮಸ್ಥರು ಮುಂಬರುವ ಮಸ್ಕಿ ಉಪಚುನಾವಣೆಯ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.
ಬುದ್ದಿನ್ನಿ, ಹಾಲಾಪುರ, ಸಾನಾಬಾಳ, ಬೆಂಚಮರಡಿ ಸೇರಿ 8 ಗ್ರಾಮಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣಕ್ಕೆ ಮಸ್ಕಿ ಇಲ್ಲವೇ ಪಾಮನಕಲ್ಲೂರಿಗೆ ಹೋಗಬೇಕು. ಸಾರಿಗೆ ಸಂಸ್ಥೆ ಬಸ್ಗಳು ಸಮಯಕ್ಕೆ ಸರಿಯಾಗಿ ಬರದ ಹಿನ್ನಲೆ ವಿದ್ಯಾರ್ಥಿಗಳು 6-7 ಕಿ.ಮೀ ನಡೆದೇ ಶಾಲೆಗೆ ಹೋಗಬೇಕು.
ಹೆಣ್ಣು ಮಕ್ಕಳನ್ನು ಕಳುಹಿಸಲು ಹಿಂಜರಿಯುವ ಪಾಲಕರು ಶಾಲೆ ಬಿಡಿಸಿ ಮದುವೆ ಮಾಡುತ್ತಿದ್ದಾರೆ. ಇನ್ನಷ್ಟು ಮಕ್ಕಳು ಪಾಲಕರೊಂದಿಗೆ ಗುಳೇ, ಕೂಲಿ ಕೆಲಸಕ್ಕೆಂದು ಹೋಗುತ್ತಿದ್ದಾರೆ. 2013ರಿಂದ ಇಲ್ಲಿ ಹೈಸ್ಕೂಲ್ ನೀಡಿ ಎಂದು ಗ್ರಾಮಸ್ಥರು ಹೋರಾಟ ಆರಂಭಿಸಿದ್ದಾರೆ. ಸುದೀರ್ಘ ಹೋರಾಟಕ್ಕೆ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ.
ಈ ಮಧ್ಯೆ 2016-17 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಶಾಲಾ ಕಟ್ಟಡಕ್ಕೆ ಅನುದಾನ ನೀಡಿದ್ದಾರೆ. ಅನುದಾನ ಬಳಕೆಯಾಗಿ ಕಟ್ಟಡ ನಿರ್ಮಾಣವಾಗಿದೆ. ಆದ್ರೆ, ಹೈಸ್ಕೂಲ್ ಇಲ್ಲದೆ ಇರುವುದರಿಂದ ಜತೆಗೆ ಕೊಟ್ಟ ಭರವಸೆಯಂತೆ ಪ್ರೌಢಶಾಲಾ ನಿರ್ಮಿಸದೆ ಇರುವುದರಿಂದ ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.