ರಾಯಚೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ಗೆ ಸೇರಿದ 9 ಒಎಂಆರ್ ಶೀಟ್ ಪತ್ತೆಯಾಗಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಬೆಂಗಳೂರಿನಿಂದ ಶೀಟ್ ತಂದು ಲಿಂಗಸೂಗೂರಿನಲ್ಲಿ ಎಫ್ಡಿಎ, ಎಸ್ಡಿಎ ಪರೀಕ್ಷೆಯ ಅಸಲಿ ಒಎಂಆರ್ ಶೀಟ್ ಲೀಕ್ ಆಗಿರಬಹುದೆಂದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೀಗ ರಾಜ್ಯದ ಬೇರೆ ಎರಡು ಜಿಲ್ಲೆಗಳಿಂದ ಒಎಂಆರ್ ಶೀಟ್ ಲೀಕ್ ಆಗಿರುವುದು ದೃಢವಾಗಿದೆ.
ಎಫ್ಡಿಎ, ಎಸ್ಡಿಎ ಅಡಿಯಲ್ಲಿ ಕೆಲಸ ಕೊಡಿಸುವುದಾಗಿ ಲಿಂಗಸೂಗೂರು ತಾಲೂಕಿನ ಇಬ್ಬರು ವ್ಯಕ್ತಿಗಳು ಕೆಪಿಎಸ್ಸಿಗೆ ಸೇರಿದ ಒಎಂಆರ್ ಶೀಟ್ಗಳ ತೆಗೆದುಕೊಂಡು ಬಂದು ಮನೆಯಲ್ಲಿ ಪರೀಕ್ಷೆ ಬರೆಸುತ್ತಿದ್ದರು. ಈ ಒಎಂಆರ್ ಶೀಟ್ಗಳು ಬೆಂಗಳೂರಿನಿಂದ ಬಂದಿರಬಹುದೆಂದು ಸಂಶಯ ವ್ಯಕ್ತವಾಗಿತ್ತು. ಆದ್ರೆ ಈ ಒಎಂಆರ್ ಶೀಟ್ ಪತ್ತೆಯಾಗಿರುವುದು ದಾವಣಗೆರೆ, ಕಲಬುರಗಿ ಜಿಲ್ಲೆಯಲ್ಲಿ ಎಂಬುದು ತಿಳಿದುಬಂದಿದೆ.
ಲಿಂಗಸೂಗೂರಿನ ದೇವಪ್ಪ ನೀರಲಕೇರಿ, ಅಜೇಯಾ ಮೇಹ್ತಾ ಇಬ್ಬರು ಕೆಪಿಎಸ್ಸಿಗೆ ಸೇರಿದ 9 ಒಎಂಆರ್ ಶೀಟ್ಗಳನ್ನು ತೆಗೆದುಕೊಂಡು ಬಂದು ಎಫ್ಡಿಎ, ಎಸ್ಡಿಎ ಕೆಲಸ ನೀಡುವ ಭರವಸೆ ನೀಡಿ, ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದರು. ಹಣ ನೀಡಿದವರು ಅನುಮಾನಗೊಂಡು ಲಿಂಗಸೂಗೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಕೆಪಿಎಸ್ಸಿಗೆ ಸೇರಿದ 9 ಒಎಂಆರ್ ಶೀಟ್ಗಳನ್ನು ವಶಕ್ಕೆ ಪಡೆದಿದ್ದರು. ಈ ಒಎಂಆರ್ ಶೀಟ್ಗಳು ಅಸಲಿನಾ, ನಕಲಿನಾ? ಎಂಬುವುದರ ಕುರಿತು ಪೊಲೀಸರು ಕೆಪಿಎಸ್ಸಿಗೆ ಪತ್ರ ಬರೆದಿದ್ದರು. ಆಗ ಕೆಪಿಎಸ್ಸಿ 9 ಒಎಂಆರ್ ಶೀಟ್ಗಳು ಅಸಲಿ ಎಂದು ಆಯೋಗ ಸ್ಪಷ್ಟಪಡಿಸಿತ್ತು.
ಬಳಿಕ ಈ ಒಎಂಆರ್ ಶೀಟ್ಗಳು ದಾವಣಗೆರೆ ಹಾಗೂ ಕಲಬುರಗಿಯಿಂದ ವಿತರಣೆಯಾಗಿವೆ ಎಂಬುದು ತನಿಖೆಯ ವೇಳೆ ದೃಢವಾಗಿದೆ. ಇನ್ನು, ರಾಯಚೂರಿಂದ ಒಎಂಆರ್ ಶೀಟ್ಗಳು ಹೊರಬಂದಿವೆ ಎನ್ನಲಾಗುತ್ತಿತ್ತು. ಆದರೀಗ ಈ ನಂಟು ದಾವಣಗೆರೆ ಹಾಗೂ ಕಲಬುರಗಿ ಕಡೆ ತಿರುಗಿದೆ. ಈ ಕುರಿತು ಎರಡೂ ಜಿಲ್ಲೆಯಲ್ಲೂ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.