ರಾಯಚೂರು: ಸಹೋದರಿ ಮೊಬೈಲ್ಗೆ ಸಂದೇಶ ಕಳುಹಿಸಿರುವುದನ್ನು ಪ್ರಶ್ನೆ ಮಾಡಿದ ಸಹೋದರನನ್ನೇ ಹತ್ಯೆ ಮಾಡಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದುರ್ಘಟನೆ ನಡೆದಿದೆ.
ದೇವರಾಜ್(23) ಮೃತ ಯುವಕನೆಂದು ಗುರುತಿಸಲಾಗಿದೆ. ಬಸವರಾಜ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಆರೋಪಿಯು ಮೃತ ದೇವರಾಜ್ ಸಹೋದರಿಗೆ ಪ್ರೀತಿ ಮಾಡುವಂತೆ ಕಿರುಕುಳ ಕೊಡ್ತಿದ್ದ ಎಂಬ ಆರೋಪವಿದ್ದು, ಆಕೆಗೆ ಮೆಸೇಜ್ ಕಳುಹಿಸುವುದು, ಸಿಕ್ಕಲ್ಲಿ ಮಾತನಾಡಿಸೋದನ್ನು ಮಾಡುತ್ತಿದ್ದನಂತೆ. ಹೀಗಾಗಿ ದೇವರಾಜ್ ಬೈದು ಬುದ್ಧಿ ಹೇಳಿದ್ದ. ಬಳಿಕ ಬಸವರಾಜ್ ತನ್ನ ಸ್ನೇಹಿತ ಲಿಂಗಣ್ಣನಿಂದ ಮೆಸೇಜ್ ಮಾಡಿಸಿದ್ದ ಎಂಬ ಆರೋಪ ಕೇಳಿ ಬಂದಿತ್ತು.
ಈ ವಿಚಾರಕ್ಕೆ ದೇವರಾಜ್ ಹಾಗೂ ಆರೋಪಿ ಬಸವರಾಜ್ ಕಡೆಯವರ ಮಧ್ಯೆ ಗಲಾಟೆ ನಡೆದಿತ್ತು. ಆಗ ದೇವರಾಜ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತ ಕೂಡ ಗಾಯಗೊಂಡಿದ್ದು, ಲಿಂಗಸೂಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಕುರಿತಂತೆ ಆರೋಪಿ ವಿರುದ್ಧ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಜಾತಿ ನಿಂದನೆ ಆರೋಪದಡಿ ಮೃತ ದೇವರಾಜ್ ಹಾಗೂ ಮೌನೇಶ್ ವಿರುದ್ಧ ಪ್ರತಿ ದೂರು ದಾಖಲಿಸಲಾಗಿದೆ.
ಇತ್ತೀಚೆಗೆ ಜೋಡಿ ಕೊಲೆ ಪ್ರಕರಣ: ಮೈಸೂರು ಜಿಲ್ಲೆಯ ಹುಣಸೂರಿನ ಸಾಮಿಲ್ಯೊಂದರಲ್ಲಿ ಇತ್ತೀಚೆಗೆ ಇಬ್ಬರು ವ್ಯಕ್ತಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪಟ್ಟಣದಲ್ಲಿ ಜೂನ್ 21ರಂದು ಮಧ್ಯರಾತ್ರಿ ವೇಳೆ ನಡೆದಿರುವ ಕೊಲೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ಕೊಲೆಯಾದವರನ್ನು ವೆಂಕಟೇಶ್ ಮತ್ತು ಷಣ್ಮುಖ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಜಿಲ್ಲೆಯ ಹುಣಸೂರು ಪಟ್ಟಣದ ಪರಸಯ್ಯನ ಛತ್ರದ ಬಳಿಯಿರುವ ಎಸ್.ಎನ್. ಶಾಮಿಲ್ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ (75) ಮತ್ತು ಶಾಮಿಲ್ನಲ್ಲಿ ಚಿಕ್ಕ ಕೆಲಸ ಮಾಡಿಕೊಂಡು ಅಲ್ಲೇ ವಾಸವಿದ್ದ, ಮಾನಸಿಕ ಅಸ್ವಸ್ಥ ಷಣ್ಮುಖ (65) ಹತ್ಯೆಯಾದವರು.
ಪ್ರತಿದಿನ ಶಾಮಿಲ್ ಒಳಗೆ ಮಲಗುತ್ತಿದ್ದ ವೆಂಕಟೇಶ್ ಬೆಳಗ್ಗೆ ಬೇಗ ಎದ್ದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದ್ರೆ ಜೂನ್ 22 ರಂದು ಬೆಳಗ್ಗೆ 7 ಗಂಟೆಯಾದರು ಹೊರಗೆ ಬಂದಿರಲಿಲ್ಲ. ಇದರಿಂದ ಪಕ್ಕದ ಮನೆಯವರು ಅನುಮಾಗೊಂಡು ಸಾಮಿಲ್ನ ಮಾಲೀಕರಿಗೆ ವಿಚಾರವನ್ನು ಮುಟ್ಟಿಸಿದ್ದರು. ನಂತರ, ಮಾಲೀಕರು ಸಾಮಿಲ್ಗೆ ಬಂದು ನೋಡಿದರೆ ಇಬ್ಬರು ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿತ್ತು. ತಕ್ಷಣವೇ ಪೊಲೀಸರಿಗೆ ಮಾಲೀಕರು ವಿಷಯ ತಿಳಿಸಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಸಾಮಿಲ್ನಲ್ಲಿ ವಾಚ್ ಮ್ಯಾನ್ ವೆಂಕಟೇಶ್ ಹಾಗೂ ಷಣ್ಮುಖ ಕೊಲೆಗೆ ಕಾರಣವೇನು ಎಂಬುದು ತಿಳಿದಿಲ್ಲ. ಅಮಾಯಕರ ಕೊಲೆಗೆ ದುಷ್ಕರ್ಮಿಗಳು ಸಂಚು ಏನೆಬುಂದು ಗೊತ್ತಾಗಿಲ್ಲ. ಬೆಲೆ ಬಾಳುವ ಮರಗಳನ್ನು ಕದಿಯಲು ಬಂದಿರಬಹುದು ಅಥವಾ ಬೇರೆ ಕಾರಣ ಇರಬಹುದೇ ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಅಡಿಷನಲ್ ಎಸ್ಪಿ ನಂದಿನಿ ಆಗಮಿಸಿ ಪರಿಶೀಲಿಸಿದ್ದರು.
ಇದನ್ನೂ ಓದಿ: ಪತ್ನಿ ಸರಿಯಿಲ್ಲವೆಂದು ರಸ್ತೆ ಮಧ್ಯೆ ಚಾಕು ಇರಿದ ಪತಿ.. ಆರೋಪಿ ಬಂಧಿಸಿದ ಬಾಣಸವಾಡಿ ಪೊಲೀಸರು